2024ರ ಲೋಕಸಭೆ ಚುನಾವಣೆಗೆ ಮುನ್ನವೇ ‘ಇಂಡಿಯಾ ಮೈತ್ರಿಕೂಟ’ ಭಾರೀ ಹಿನ್ನಡೆ ಅನುಭವಿಸಿದೆ. ಸೀಟು ಹಂಚಿಕೆಯ ಕಸರತ್ತಿನಲ್ಲಿ ತೊಡಗಿರುವ ‘INDIA’ ಮೈತ್ರಿಯ ಒಗ್ಗಟ್ಟು ಒಡೆಯುವ ಲಕ್ಷಣ ಕಾಣುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಾವು ಕೊಟ್ಟಿದ್ದ ಪ್ರಸ್ತಾವನೆಗಳೆಲ್ಲ ಮುರಿದು ಬಿದ್ದಿವೆ. ನನ್ನ ಪ್ರಸ್ತಾವನೆಗೆ ಒಪ್ಪಿಗೆ ಸಿಗಲಿಲ್ಲ, ಹಾಗಾಗಿ ಈಗ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳಿದ ಅವರು, ರಾಹುಲ್ ಗಾಂಧಿ ರ್ಯಾಲಿ ನಡೆಯುತ್ತಿದ್ದು, ಟಿಎಂಸಿ ಮೈತ್ರಿಕೂಟದಲ್ಲಿದ್ದರೂ ಈ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಇಂಡಿಯಾ ಜೊತೆ ಯಾವುದೇ ಮೈತ್ರಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ ಬೆನ್ನಲ್ಲೇ, ಪಂಜಾಬ್‌ನಲ್ಲಿಯೂ ವಿಪಕ್ಷ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಟಿಎಂಸಿ ನಂತೆ ಎಎಪಿ ಕೂಡ ಪಂಜಾಬ್ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸೂಚನೆ ನೀಡಿದ್ದಾರೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಎಲ್ಲಾ 13 ಸ್ಥಾನಗಳ
ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲ್ಲಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ನಾವು ಈ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಭಗವಂತ್ ಮಾನ್ ಹೇಳಿದ್ದಾರೆ.ಈ ಬಗ್ಗೆ ಕೇಜ್ರಿವಾಲ್ ಜೊತೆಗೆ ಮಾತುಕತೆ ನಡೆದಿದ್ದು ಅವರು ಕೂಡ ಪಂಜಾಬ್ ಎಎಪಿ ನಿರ್ಧಾರಕ್ಕೆ ಬೆಂಬಲ ಸೂಚಿಸಿದ ಬಗ್ಗೆ ವರದಿಯಾಗಿದೆ.ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ರೂಪಿಸಿದ ಮೈತ್ರಿಕೂಟ ಚುನಾವಣೆಗೆ ಮೊದಲೇ ಛಿದ್ರವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.















