ನವದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮಹಾರಾಷ್ಟ್ರದಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಲೋಕಸಭಾ ಚುನಾವಣೆಯಲ್ಲಿ ಇದೇ ರಾಜ್ಯದಲ್ಲಿ ಎದುರಿಸಿದ್ದ ಹೀನಾಯ ಪ್ರದರ್ಶನವನ್ನು ಎನ್‌ಡಿಎ ಹಿಮ್ಮೆಟ್ಟಿಸಿದ್ದು ಆರಂಭಿಕ ಟ್ರೆಂಡ್‌ಲ್ಲಿ ಗೋಚರವಾಗಿದೆ. ಆದರೆ, ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನು ಅಲುಗಾಡಿಸಲು ಎನ್‌ಡಿಎ ಸಾಧ್ಯವಾಗಿಲ್ಲ. ಜಾರ್ಖಂಡ್ ರಾಜ್ಯದಲ್ಲಿ ಎನ್‌ಡಿಎ ಹಿನ್ನಡೆ ಕಂಡಿರುವುದು ಟ್ರೆಂಡ್‌ನಲ್ಲಿ ಗೋಚರವಾಗಿದೆ.
ಮಹಾರಾಷ್ಟ್ರದಲ್ಲಿ, ಬಿಜೆಪಿ, ಅಜಿತ್ ಪವಾರ್ ಅವರ ಎನ್‌ಸಿಪಿ ಬಣ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ ಒಳಗೊಂಡಿರುವ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಇಲ್ಲಿಯವರೆಗೂ 216 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 288 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) 60 ಸ್ಥಾನಗಳಲ್ಲಿ ಮುಂದಿದೆ, ಇಲ್ಲಿ ಬಹುಮತ ಸಾಧಿಸಲು 145 ಇಲ್ಲಿ ಮ್ಯಾಜಿಕ್ ನಂಬರ್ ಆಗಿದೆ.
ಜಾರ್ಖಂಡ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಆಡಳಿತಾರೂಢ ಒಕ್ಕೂಟವು 81 ಸದಸ್ಯ ಬಲದ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ಬೇಕಾದ 42 ಮ್ಯಾಜಿಕ್ ನಂಬರ್‌ಅನ್ನು ದಾಟಿ 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಎನ್‌ಡಿಎ 30 ರಲ್ಲಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್
ಸೇರಿದಂತೆ ಇಂಡಿಯಾ ಒಕ್ಕೂಟ ಜಾರ್ಖಂಡ್ ಅನ್ನು ಉಳಿಸಿಕೊಳ್ಳಲು ಮತ್ತು ಮಹಾರಾಷ್ಟ್ರದಲ್ಲಿ ಮಹಾಯುತಿಯನ್ನು ಸೋಲಿಸುವ ನಿರೀಕ್ಷೆಯಲ್ಲಿತ್ತು. ಈ ನಡುವೆ, ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸಾಧನೆಯಿಂದ ಉತ್ತೇಜಿತವಾಗಿರುವ ಬಿಜೆಪಿ, ಎರಡೂ ರಾಜ್ಯಗಳಲ್ಲಿ ನಿರ್ಣಾಯಕ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಇದರೊಂದಿಗೆ 13 ರಾಜ್ಯಗಳಾದ್ಯಂತ 48 ವಿಧಾನಸಭಾ ಉಪಚುನಾವಣೆಗಳು ಮತ್ತು ಎರಡು ಪ್ರಮುಖ ಸಂಸದೀಯ ಕ್ಷೇತ್ರಗಳಾದ ಮಹಾರಾಷ್ಟ್ರದ ನಾಂದೇಡ್ ಹಾಗೂ ಕೇರಳದ ವಯನಾಡ್ ಕ್ಷೇತ್ರದ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ವಯನಾಡ್ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಯುದ್ಧವಾಗಿದೆ, ಈ ಹಿಂದೆ ಲೋಕಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರ ಸಹೋದರ ರಾಹುಲ್ ಗಾಂಧಿ ಅವರು ಸ್ಥಾನವನ್ನು ತೆರವು ಮಾಡಿದ ನಂತರ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು ಸುಲಭ ಗೆಲುವಿನ ಹಾದಿಯಲ್ಲಿದ್ದಾರೆ.















