ಅಬಕಾರಿ ನೀತಿ ಹಗರಣ; ಅರವಿಂದ್ ಕೇಜ್ರಿವಾಲ್ ರಾಜೀನಾಮೆ, ಅತಿಶಿ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ.

Coastal Bulletin
ಅಬಕಾರಿ ನೀತಿ ಹಗರಣ; ಅರವಿಂದ್ ಕೇಜ್ರಿವಾಲ್ ರಾಜೀನಾಮೆ, ಅತಿಶಿ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ.

ದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅರವಿಂದ್ ಕೇಜ್ರಿವಾಲ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ದೆಹಲಿ ಸಿಎಂ ಸ್ಥಾನಕ್ಕೆ ಇದೀಗ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರನ್ನು ಭೇಟಿಯಾದ ಕೇಜ್ರಿವಾಲ್, ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೈಲಿಂದ ಬಿಡುಗಡೆಯಾಗಿ ಹೊರಕ್ಕೆ ಬರುತ್ತಿದ್ದಂತೆಯೇ ಕೇಜ್ರಿವಾಲ್ ತಮ್ಮ ರಾಜೀನಾಮೆ ನಿರ್ಧಾರ ಘೋಷಿಸಿದ್ದರು. ಇನ್ನು ಎರಡು ದಿನಗಳಲ್ಲಿ ರಾಜೀನಾಮೆ ನೀಡೋ ಮಾತನ್ನಾಡಿದ್ದು, ಇದೀಗ ತಾವು ಹೇಳಿದಂತೆಯೇ ಸಿಎಂ ಸ್ಥಾನಕ್ಕೆ ರಿಸೈನ್ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಅತಿಶಿ ಮರ್ಲೆನಾ ಸಿಂಗ್ ಆಯ್ಕೆಯಾಗಿದ್ದಾರೆ. ಇಂದು ಬೆಳಗ್ಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಸಿಎಂ ಆಗಿ ಸಚಿವೆ ಅತಿಶಿ ಅವರನ್ನು ಆಯ್ಕೆ ಮಾಡಲಾಗಿದ್ದು, ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದೆಹಲಿ ಭಾವಿ ಸಿಎಂ ಅತಿಶಿ ಯಾರು?

ಕೇವಲ 5 ವರ್ಷಗಳ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗಿ ಅಚ್ಚರಿ ಮೂಡಿಸಿರುವ 43ರ ನಾಯಕಿ ಅತಿಶಿ ಮರ್ಲೆನಾ ಸಿಂಗ್. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಅತಿಶಿ ಅವರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಪೂರ್ವ ದೆಹಲಿಯ ಉಸ್ತುವಾರಿಯಾಗಿ ನೇಮಿಸಲಾಯಿತು. ಅವರು ಬಿಜೆಪಿ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ 4.77 ಲಕ್ಷ ಮತಗಳ ಅಂತರದಿಂದ ಸೋತರು.

ಸಚಿವೆಯಾಗಿ ದೆಹಲಿ ಸರ್ಕಾರದಲ್ಲಿ ಸೇವೆ

2020ರ ದೆಹಲಿ ವಿಧಾನಸಭೆ ಚುನಾವಣೆಯ ಸಮಯದಲ್ಲಿ, ಅತಿಶಿ ದಕ್ಷಿಣ ದೆಹಲಿಯ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ಬಿಜೆಪಿ ಅಭ್ಯರ್ಥಿ ಧರಂಬೀರ್ ಸಿಂಗ್ ಅವರನ್ನು 11,422 ಮತಗಳಿಂದ ಸೋಲಿಸಿ, ಶಾಸಕಿಯಾದರು.

ಬಳಿಕ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ರಾಜೀನಾಮೆಯ ನಂತರ ಸೌರಭ್ ಭಾರದ್ವಾಜ್ ಅವರೊಂದಿಗೆ ಕ್ಯಾಬಿನೆಟ್ ಸಚಿವರಾಗಿ ದೆಹಲಿ ಸರ್ಕಾರಕ್ಕೆ ಅತಿಶಿ ಸೇರ್ಪಡೆಗೊಂಡರು.

ದೆಹಲಿ ಸಿಎಂ ಸ್ಥಾನಕ್ಕೇರುತ್ತಿರುವ ಮೂರನೇ ಮಹಿಳೆ!

ಬಿಜೆಪಿ ನಾಯಕಿ, ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ನಂತರ ಅತಿಶಿ ದೆಹಲಿ ಸಿಎಂ ಹುದ್ದೆ ಅಲಂಕರಿಸುವ ಮೂರನೇ ಮಹಿಳೆಯಾಗಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂತರ ದೇಶದಲ್ಲಿ ಪ್ರಸ್ತುತ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸುಷ್ಮಾ ಸ್ವರಾಜ್ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾದರು. 1998ರಲ್ಲಿ ಅವರು ರಾಜೀನಾಮೆ ನೀಡುವವರೆಗೆ 52 ದಿನಗಳ ಕಾಲ ಸಿಎಂ ಆಗಿ ಅಧಿಕಾರದಲ್ಲಿ ಸೇವೆ ಸಲ್ಲಿಸಿದರು. ಬಿಜೆಪಿಯಿಂದ ಮೊದಲ ಮಹಿಳಾ ಮುಖ್ಯಮಂತ್ರಿಯೂ ಆಗಿದ್ದರು. ಬಳಿಕ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು 1998 ರಿಂದ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಾರಣ ದೆಹಲಿಯ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದಾರೆ.

Leave a Comment