ಆಗ್ರಾ(ಉತ್ತರ ಪ್ರದೇಶ): ವಕ್ಫ್ ತಿದ್ದುಪಡಿ ಕಾಯ್ದೆ ಮತ್ತು ತ್ರಿವಳಿ ತಲಾಖ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಲು ಮೊಘಲ್ ವಂಶಸ್ಥ ಮತ್ತು ಬಹದ್ದೂರ್ ಶಾ ಜಾಫರ್ ಅವರ ಮರಿಮೊಮ್ಮಗ ರಾಜಕುಮಾರ ಯಾಕೂಬ್ ಹಬೀಬುದ್ದೀನ್ ಟುಸ್ಸಿ ಸಜ್ಜಾಗಿದ್ದಾರೆ. ಈ ಕುರಿತು ಚರ್ಚಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಭಾರತದಲ್ಲಿ ವಕ್ಫ್ ತಿದ್ದುಪಡಿ ಮತ್ತು ತ್ರಿವಳಿ ತಲಾಖ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ. ಜೊತೆಗೆ, ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಔರಂಗಜೇಬ್ ಸಮಾಧಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಎರಡು ಕಾನೂನುಗಳು ಮುಸ್ಲಿಮರ ವಿರುದ್ಧವಾಗಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮುದಾಯದ ಎಲ್ಲ ನಿಯಮಗಳನ್ನು ಬದಲಿಸುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ನಮ್ಮ ಪರಂಪರೆ, ಇತಿಹಾಸವನ್ನು ರಕ್ಷಿಸಿಕೊಳ್ಳಬೇಕಿದೆ. ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೇವೆ ಎಂದು ರಾಜಕುಮಾರ ಯಾಕೂಬ್ ಹೇಳಿದ್ದಾರೆ. ಔರಂಗಜೇಬ್ ಸ್ಮಾರಕಕ್ಕೆ ರಕ್ಷಣೆ ನೀಡಿ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಔರಂಗಜೇಬ್ ಸಮಾಧಿಯು ಯುನೆಸ್ಕೋದ ಸಾಂಸ್ಕೃತಿಕ ಮಹತ್ವವುಳ್ಳ ಜಾಗವಾಗಿದೆ. ಅದನ್ನು ವಿರೂಪ ಮಾಡುವ ಯತ್ನಗಳು ನಡೆದಿವೆ. ಹೀಗಾಗಿ, ತಕ್ಷಣವೇ ಸಮಾಧಿ ಸ್ಥಳಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಂತಾರಾಷ್ಟ್ರೀಯ ಕೋರ್ಟ್ ಮೊರೆ: ವಕ್ಫ್ ತಿದ್ದುಪಡಿ ಮತ್ತು ತ್ರಿವಳಿ ತಲಾಖ್ ಕುರಿತು ಪ್ರಸ್ತುತ, ವಿಶ್ವಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಬಳಿಕ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಎದುರು ಮನವಿ ಮಾಡಲಾಗುವುದು. ಸಮುದಾಯದ ಪರಂಪರೆಗೆ ಉಂಟಾದ ಚ್ಯುತಿ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಅಂಗೀಕರಿಸಿದೆ. ರಾಷ್ಟ್ರಪತಿಗಳು ಇದಕ್ಕೆ ಅಂಕಿತ ಹಾಕಿದ್ದು, ಕಾನೂನಾಗಿ ಜಾರಿಗೆ ಬಂದಿದೆ. ಇದರ ವಿರುದ್ಧ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ.
ಆದರೆ, ವಕ್ಫ್ ಆಸ್ತಿಗಳ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಸಮಗ್ರ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ವಕ್ಫ್
ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದೆ.
ಸುಪ್ರೀಂ ಕೋರ್ಟ್ಗೆ ಅರ್ಜಿ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ವಿಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ, ಆರ್‌ಜೆಡಿ, ಟಿಎಂಸಿ, ಡಿಎಂಕೆ, ಎಐಎಂಐಎಂ ಮುಂತಾದ ರಾಜಕೀಯ ಪಕ್ಷಗಳ ನಾಯಕರಲ್ಲದೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಮಿಯತ್ ಉಲೇಮಾ-ಎ-ಹಿಂದ್ ಸೇರಿದಂತೆ ಅನೇಕ ಸಂಘಟನೆಗಳು ಹೊಸ ವಕ್ಫ್ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.














