ಹೊಸ ದಿಲ್ಲಿ: ಸಂಸತ್ ಭವನದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಭದ್ರತಾ ಲೋಪ ಎದುರಾಗಿದೆ. ಇಬ್ಬರು ಅಪರಿಚಿತರು ಲೋಕಸಭೆಯಿಂದ ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಸ್ಥಳಕ್ಕೆ ನೆಗೆದು ಕುರ್ಚಿಯಿಂದ ಕುರ್ಚಿಗೆ ಎಗರುತ್ತಾ ಬಣ್ಣಗಳ ಹೊಗೆ ಬರುವ ವಸ್ತುಗಳನ್ನ ಸಿಡಿಸಿದ್ದಾರೆ. ಇದರಿಂದ ಬೆದರಿದ ಸಂಸದರು ಸಂಸತ್ ಭವನದಿಂದ ಹೊರಗೆ ಓಡಿ ಹೋಗಿದ್ದಾರೆ. ಸಂಸತ್‌ನ ಒಳಗೆ ಇಬ್ಬರು ಯುವಕರು ಹಾಗೂ ಸಂಸತ್‌ನ ಹೊರಗೆ ಓರ್ವ ಯುವಕ ಹಾಗೂ ಓರ್ವ ಯುವತಿ ಈ ಕೃತ್ಯ ಎಸಗಿದ್ದು, ಎಲ್ಲರನ್ನೂ ಬಂಧಿಸಲಾಗಿದೆ.
2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆದು 22 ವರ್ಷ ಆದ ದಿನವೇ ಈ ಘಟನೆ ನಡೆದಿದೆ. ಸಂಸತ್‌ನಲ್ಲಿ ಎದುರಾಗಿರುವ ಈ ಭದ್ರತಾ ಲೋಪ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಂಸದರು ಭದ್ರತಾ
ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಕೂಡಾ ಆಗ ತಾನೇ ಸದನಕ್ಕೆ ಆಗಮಿಸುತ್ತಿದ್ದರು. ಈ ವೇಳೆಯಲ್ಲೇ ನಡೆದ ಈ ಘಟನೆ ಖಂಡಿತವಾಗಿಯೂ ಭದ್ರತಾ ಲೋಪ ಎಂದು ಅವರು ಹೇಳಿದ್ದಾರೆ.














