ಶ್ರೀನಗರ: 2019 ರಲ್ಲಿ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಮಾಡುವ ಮೂಲಕ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು. ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು. ಹಲವು ಸುತ್ತಿನ ವಾದ-ವಿವಾದಗಳ ನಂತರ ಇಂದು ಸುಪ್ರೀಂ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಲಿದೆ. ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಇಂದು ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ತೀವ್ರ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ನಾವು ಯಾವ ಭರವಸೆ ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಅಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆಯೋ ಅದೇ ಭರವಸೆ ಇಂದು ಕೂಡ ಇದೆ. ನಮಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದಿದ್ದಾರೆ.ಒಂದು ವೇಳೆ ಸುಪ್ರೀಂ ಕೋರ್ಟ್ ತೀರ್ಪು ನಮ್ಮ ವಿರುದ್ಧವಾಗಿ ಬಂದರೆ ಸಂವಿಧಾನದ ಚೌಕಟ್ಟಿನೊಳಗೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಶಾಂತಿಯುತವಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ರಾಜಕಾರಣಿಗಳಂತೆ ಇಲ್ಲಿನ ನಿವಾಸಿಗಳೂ ಕೂಡ ಇಂದಿನ ತೀರ್ಪಿನ ಬಗ್ಗೆ
ಆತಂಕ, ಕುತೂಹಲದಲ್ಲಿದ್ದಾರೆ ಎಂದರು.ಈ ಮಧ್ಯೆ, ಪೊಲೀಸರು ಕಣಿವೆ ರಾಜ್ಯದಲ್ಲಿ ತೀವ್ರ ಎಚ್ಚರ ವಹಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳ ಮೇಲೆ ನಿಗಾ ಇರಿಸಿದ್ದಾರೆ.














