ಕೇಂದ್ರ ಸರಕಾರದಿಂದ ವಕ್ಫ್ ಬೋರ್ಡ್ ತಿದ್ದುಪಡಿ ಕಾಯಿದೆ ಮಂಡನೆ: ವಕ್ಫ್ ಬೋರ್ಡ್ ಗಳಿಗೆ ಇರುವ ಪರಮಾಧಿಕಾರಕ್ಕೆ ತಡೆ.

Coastal Bulletin
ಕೇಂದ್ರ ಸರಕಾರದಿಂದ ವಕ್ಫ್ ಬೋರ್ಡ್ ತಿದ್ದುಪಡಿ ಕಾಯಿದೆ ಮಂಡನೆ: ವಕ್ಫ್ ಬೋರ್ಡ್ ಗಳಿಗೆ ಇರುವ ಪರಮಾಧಿಕಾರಕ್ಕೆ ತಡೆ.

ನವದೆಹಲಿ: ವಕ್ಫ್ ಬೋರ್ಡ್‌ (Waqf Board) ಅಧಿಕಾರವನ್ನು ಕಡಿಮೆ ಮಾಡುವ ವಕ್ಫ್ (ತಿದ್ದುಪಡಿ) ಮಸೂದೆ 2024 ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್‌ ರಿಜುಜು ಅವರು ಮಸೂದೆಯನ್ನು ಮಂಡಿಸಿದರು. ಈ ಮಸೂದೆ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು ಇಂಡಿಯಾ ಮೈತ್ರಿಕೂಟ ವಿರೋಧಿಸಿದೆ.

ಏನಿದು ವಕ್ಫ್‌?

ಇಸ್ಲಾಮಿಕ್ ಕಾನೂನುಗಳ ಪ್ರಕಾರ ಧಾರ್ಮಿಕ ಕಾರ್ಯಕ್ಕೆ ಬಳಕೆ ಮಾಡುವ ಅಥವಾ ದಾನ ನೀಡಿದ ಆಸ್ತಿಗಳನ್ನು ವಕ್ಫ್ ಆಸ್ತಿ ಎನ್ನಲಾಗುತ್ತದೆ.

ಒಮ್ಮೆ ಯಾವುದೇ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಗುರ್ತಿಸಿದರೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಭಾರತ ದೇಶದಲ್ಲಿ ಒಟ್ಟು 30 ವಕ್ಫ್‌ ಮಂಡಳಿಗಳಿದ್ದು, ಒಟ್ಟು 9 ಲಕ್ಷ ಎಕರೆ ಭೂಮಿಯನ್ನ ನಿರ್ವಹಿಸುತ್ತಿವೆ ಈ ಭೂಮಿಯ ಒಟ್ಟು ಮೌಲ್ಯ ಸುಮಾರು 1.2 ಲಕ್ಷ ಕೋಟಿ ರೂ. ಎನ್ನಲಾಗಿದೆ. ಇದೇ ಕಾರಣಕ್ಕಾಗಿ ವಕ್ಫ್‌ ಬೋರ್ಡ್‌ ಇಡೀ ಭಾರತದಲ್ಲೇ ಅತಿ ಹೆಚ್ಚು ಭೂಮಿಯ ಮಾಲೀಕತ್ವ ಹೊಂದಿರುವ ಮೂರನೇ ಸಂಸ್ಥೆಯಾಗಿದೆ. ರೈಲ್ವೆ ಹಾಗೂ ರಕ್ಷಣಾ ಇಲಾಖೆ ಬಳಿಕ ವಕ್ಫ್‌ ಮಂಡಳಿ ಬಳಿಯಲ್ಲೇ ಹೆಚ್ಚು ಭೂಮಿ ಇದೆ. ಈ ಹಿನ್ನೆಲೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ವಕ್ಫ್‌ ತಿದ್ದುಪಡಿ ಮಸೂದೆಯ 5 ಮುಖ್ಯಾಂಶಗಳು:

ಹಲವು ಮಹತ್ವದ ಸುಧಾರಣೆಗಳನ್ನ ಈ ತಿದ್ದುಪಡಿ ಮಸೂದೆ ಪ್ರಸ್ತಾಪಿಸಿದೆ. ಪ್ರಮುಖವಾಗಿ ರಾಜ್ಯಗಳ ವಕ್ಫ್‌ ಮಂಡಳಿ ಜೊತೆಯಲ್ಲೇ ಕೇಂದ್ರೀಯ ವಕ್ಫ್‌ ಸಮಿತಿ ರಚನೆ, ಮುಸ್ಲಿಂ ಮಹಿಳೆ ಹಾಗೂ ಮುಸ್ಲಿಮೇತರ ಸದಸ್ಯರ ನೇಮಕ, ಪ್ರತಿ ರಾಜ್ಯಗಳ ಬೋರ್ಡ್‌ಗಳು ಹಾಗೂ ಕೇಂದ್ರೀಯ ಪರಿಷತ್‌ನಲ್ಲೂ ತಲಾ ಇಬ್ಬರು ಮಹಿಳೆಯರನ್ನು ನೇಮಕ

ಮಾಡಬೇಕೆಂದು ತಿದ್ದುಪಡಿ ಮಸೂದೆ ಹೇಳುತ್ತದೆ.

ಯಾವುದೇ ಭೂಮಿಯನ್ನು ವಕ್ಫ್‌ ಆಸ್ತಿ ಅಥವಾ ಸರ್ಕಾರಿ ಭೂಮಿ ಎಂದು ನಿರ್ಧರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕೈಗೆ ನೀಡಬೇಕು ಎಂದು ಮಸೂದೆ ಹೇಳುತ್ತದೆ. ಈ ಮೂಲಕ ವಕ್ಫ್‌ ನ್ಯಾಯಾಧಿಕರಣದಿಂದ ಅಧಿಕಾರವು ಡಿಸಿಗೆ ಹಸ್ತಾಂತರ ಆಗುತ್ತದೆ. ಈ ಬದಲಾವಣೆಗೆ ಪ್ರಮುಖವಾಗಿ ವಿರೋಧ ವ್ಯಕ್ತವಾಗುತ್ತಿದೆ. ಏಕೆಂದರೆ ಈ ರೀತಿ ಅಧಿಕಾರ ಹಸ್ತಾಂತರ ಮಾಡಿದರೆ ಆಸ್ತಿಗಳ ದುರ್ಬಳಕೆ ಆಗಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಮುಸ್ಲಿಮರ ಬೋಹರಾಸ್ ಹಾಗೂ ಅಘಖಾನಿ ಪಂಗಡದ ಆಸ್ತಿಗಳ ನಿರ್ವಹಣೆಗೆ ಪ್ರತ್ಯೇಕ ಔಕಾಫ್ ಮಂಡಳಿ ಸ್ಥಾಪನೆ ಮಾಡಬೇಕೆಂದು ಮಸೂದೆ ಹೇಳುತ್ತದೆ. ಜೊತೆಯಲ್ಲೇ ವಕ್ಫ್‌ ಮಂಡಳಿಯಲ್ಲಿ ಶಿಯಾ, ಸುನ್ನಿ, ಬೋಹರಾಸ್ ಹಾಗೂ ಅಘಖಾನಿ ಪಂಗಡಗಳ ಪ್ರಾತಿನಿಧ್ಯ ಇರಲೇಬೇಕು ಎಂದು ಹೇಳುತ್ತದೆ.

ಭಾರತ ಸರ್ಕಾರದ ಸಿಎಜಿ ನೇಮಕ ಮಾಡುವ ಆಡೀಟರ್‌ಗಳು ವಕ್ಫ್‌ ಆಸ್ತಿಗಳ ಲೆಕ್ಕ ಪರಿಶೀಲನೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ಮೂಲಕ ನೀಡಲಾಗುತ್ತದೆ.

ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿಗೆ ನೀಡುವವರು ಕಡ್ಡಾಯವಾಗಿ ‘ವಕ್ಫ್‌ನಾಮಾ’ ಮಾಡಿಸಬೇಕು. ಲಿಖಿತ ದಾಖಲೆಯಲ್ಲಿ ಆಸ್ತಿಯನ್ನು ವಕ್ಫ್‌ ಮಂಡಳಿಗೆ ಬರೆದುಕೊಡಬೇಕು ಎಂದು ಮಸೂದೆ ಹೇಳುತ್ತದೆ. ಇದಕ್ಕೂ ಮುನ್ನ ಕೇವಲ ಬಾಯಿಮಾತಿನಲ್ಲೇ ವಕ್ಫ್‌ಗೆ ಆಸ್ತಿ ಒಪ್ಪಂದ ಆಗುತ್ತಿತ್ತು.

Leave a Comment