ನವದೆಹಲಿ: ನಾಳೆಯಿಂದ 2 ದಿನಗಳ ಕಾಲ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ (G20 Summit 2023) ಕೌಂಟ್‌ಡೌನ್ ಆರಂಭವಾಗಿದೆ. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಕೆಲವು ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕರು ನವದೆಹಲಿಗೆ ಆಗಮಿಸಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಇತರ ರಾಷ್ಟ್ರಗಳ ಮುಖ್ಯಸ್ಥರು ವರ್ಷದ ಪ್ರಮುಖ ಜಾಗತಿಕ ಕೂಟಗಳಲ್ಲಿ ಒಂದಾದ ಜಿ20 ಶೃಂಗಸಭೆಯಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಆರ್ಥಿಕ ಕುಸಿತಗಳು ಮತ್ತು ಹೆಚ್ಚುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳ ಕುರಿತು ಚರ್ಚೆಗಳನ್ನು ನಡೆಸಲಿದ್ದಾರೆ.
ಉಕ್ರೇನ್‌ನಲ್ಲಿನ ಯುದ್ಧದ ಸಾಮಾಜಿಕ ಪರಿಣಾಮ, ಶುದ್ಧ ಶಕ್ತಿಯ ಪರಿವರ್ತನೆ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟ ಮತ್ತು ಬಡತನದ ವಿರುದ್ಧ ಹೋರಾಡಲು ಬಹುಪಕ್ಷೀಯ ಬ್ಯಾಂಕುಗಳ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲು ಜೋ ಬಿಡೆನ್ ಉದ್ದೇಶಿಸಿದ್ದಾರೆ.
ಇನ್ನು ರಿಷಿ ಸುನಕ್ ಅವರು ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿ ಭಾರತಕ್ಕೆ ತಮ್ಮ ಮೊದಲ ಅಧಿಕೃತ ಪ್ರವಾಸದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಕೂಡ ತಮ್ಮ ಹಾಜರಾತಿಯನ್ನು ಖಚಿತಪಡಿಸಿದ್ದಾರೆ. ಈ ವೇಳೆ ಅವರು G7 ನ ಪ್ರಸ್ತುತ ಅಧ್ಯಕ್ಷರಾಗಿ ಉಕ್ರೇನ್ ಯುದ್ಧಕ್ಕಾಗಿ ರಷ್ಯಾ ವಿರುದ್ಧ ಟೀಕೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಜಸ್ಟಿನ್ ಟ್ರುಡೊ , ಕೆನಡಾ ಪ್ರಧಾನಿ, ಪ್ರಸ್ತುತ ಇಂಡೋನೇಷ್ಯಾದಲ್ಲಿದ್ದಾರೆ, ಆದರೆ G20 ಶೃಂಗಸಭೆಗಾಗಿ ಸೆಪ್ಟೆಂಬರ್ 9 ಮತ್ತು 10 ರಂದು ಭಾರತದಲ್ಲಿ ಇರುತ್ತಾರೆ ಎಂದು ಅವರ ಕಚೇರಿ ದೃಢಪಡಿಸಿದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಭಾರತ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ಗಳನ್ನು ಒಳಗೊಂಡಿರುವ ಮೂರು ದೇಶಗಳ ಪ್ರವಾಸದ ಭಾಗವಾಗಿ ಆಸ್ಟ್ರೇಲಿಯ ಪ್ರಧಾನಿ ಆಂಥೋನಿ ಅಲ್ಬನೀಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ನವದೆಹಲಿಯಲ್ಲಿ
ಇರುತ್ತಾರೆ. ರಷ್ಯಾ ಮತ್ತು ಚೀನಾದ ಅನುಪಸ್ಥಿತಿಯ ಹೊರತಾಗಿಯೂ ಶೃಂಗಸಭೆಯು ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಕೊರಿಯಾದ ಪರಮಾಣು ಬೆದರಿಕೆಗಳು ಮತ್ತು ಕ್ಷಿಪಣಿ ಪ್ರಚೋದನೆಗಳಿಗೆ ಪ್ರತಿಕ್ರಿಯಿಸುವಂತೆ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ ಶೃಂಗಸಭೆಯಲ್ಲಿ ನಾಯಕರನ್ನು ಒತ್ತಾಯಿಸುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶೃಂಗಸಭೆಯಲ್ಲಿ ಗೈರು ಹಾಜರಾಗುತ್ತಿರುವವರಲ್ಲಿ ಕ್ಸಿ ಜಿನ್‌ಪಿಂಗ್ ಅತ್ಯಂತ ಗಮನಾರ್ಹ ವ್ಯಕ್ತಿಯಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸ್ಟೇಟ್ ಕೌನ್ಸಿಲ್‌ನ ಚೀನಾದ ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರು ದೇಶದ ನಿಯೋಗವನ್ನು ಮುನ್ನಡೆಸಲಿದ್ದಾರೆ. 2008 ರಲ್ಲಿ ನಡೆದ ಮೊದಲ ಆವೃತ್ತಿಯ ನಂತರ ಚೀನಾದ ಅಧ್ಯಕ್ಷರು ಜಿ 20 ನಾಯಕರ ಶೃಂಗಸಭೆಗೆ ಗೈರು ಹಾಜರಾಗುತ್ತಿರುವುದು ಇದೇ ಮೊದಲು.
ಇನ್ನು ವ್ಲಾಡಿಮಿರ್ ಪುಟಿನ್ ಈ ವರ್ಷ G20 ಶೃಂಗಸಭೆಗೆ ಮಿಸ್ ಆಗಲಿದ್ದಾರೆ. ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ರಷ್ಯಾದ ಅಧ್ಯಕ್ಷರಿಗೆ ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳ ಆರೋಪ ಹೊರಿಸಿ ಬಂಧನ ವಾರಂಟ್ ಹೊರಡಿಸಿದೆ, ಕ್ರೆಮ್ಲಿನ್ ಇದನ್ನು ಬಲವಾಗಿ ನಿರಾಕರಿಸಿದೆ. ಇದರರ್ಥ ಅವರು ವಿದೇಶಕ್ಕೆ ಪ್ರಯಾಣಿಸುವಾಗ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ನವದೆಹಲಿಯಲ್ಲಿ ರಷ್ಯಾ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಝ್ ಅವರು ತನಗೆ ಗುರುವಾರ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ಅವರು G20 ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇತ್ತ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಮೆಗಾ ಈವೆಂಟ್‌ನಲ್ಲಿ ಭಾಗವಹಿಸುತ್ತಿಲ್ಲ.















