ಹೈದರಾಬಾದ್ : ಸಹನಟಿಯೊಬ್ಬರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಆಕೆಗೆ ಬೆದರಿಕೆ ಹಾಕಿರುವ ಆರೋಪದಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಷ್ಪಾ ಚಿತ್ರದ ನಟ ಜಗದೀಶ್ ಪ್ರತಾಪ್ ಭಂಡಾರಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಕಿರುಕುಳಕ್ಕೆ ಒಳಗಾದ ನಟಿ ಕಳೆದ ನವೆಂಬರ್ 29ರಂದು ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ನಟನನ್ನು ಬಂಧಿಸಲಾಗಿದ್ದು, ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದ ಪುಷ್ಪ ಸಿನಿಮಾದಲ್ಲಿ ನಾಯಕ ಪುಷ್ಪರಾಜನ ಸ್ನೇಹಿತನ ಪಾತ್ರಧಾರಿ ಕೇಶವ ಪಾತ್ರ ಮಾಡಿದ್ದ ಜಗದೀಶ್ ಪ್ರತಾಪ್ ಭಂಡಾರಿ ಸಾಕಷ್ಟು ಹೆಸರು ಮಾಡಿದ್ದರು. ‘ಪುಷ್ಪ 2’ ಸಿನಿಮಾದಲ್ಲೂ ಅವರ ಪಾತ್ರ ಇದೆ.
ಮಾಹಿತಿಗಳ ಪ್ರಕಾರ, ನವೆಂಬರ್ 27ರಂದು ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆ ಬೇರೆ ಪುರುಷನೊಂದಿಗೆ ಇದ್ದಾಗ, ಜಗದೀಶ್ ಭಂಡಾರಿ ಆಕೆಗೆ ತಿಳಿಯದಂತೆ ಫೋಟೋ ತೆಗೆದಿದ್ದರು. ನಂತರ ಆ ಫೋಟೋ ತೋರಿಸಿ ಬೆದರಿಕೆ ಹಾಕಿದ್ದರು. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದರು. ಇದರಿಂದ ಮನನೊಂದ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಜಗದೀಶ್ ಈಗತಾನೆ ಗುರುತಿಸಿಕೊಳ್ಳುತ್ತಿದ್ದಾರೆ. ಪೋಷಕ
ಪಾತ್ರಗಳಿಂದ ಅವರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಇಂಥ ಸಮಯದಲ್ಲಿ ಗಂಭೀರ ಆರೋಪ ಎದುರಾಗಿದೆ.
ಆತ್ಮಹತ್ಯೆ ಮಾಡಿಕೊಂಡ ನಟಿಗೂ ಮತ್ತು ಜಗದೀಶ್‌ಗೂ ಈ ಹಿಂದೆಯೇ ಪರಿಚಯವಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕಿರುಚಿತ್ರಗಳ ಮೂಲಕವೇ ಆರಂಭದಲ್ಲಿ ಗುರುತಿಸಿಕೊಂಡಿರುವ ಜಗದೀಶ್ ಭಂಡಾರಿ ಅವರು, 2019ರಲ್ಲಿ ಮಲ್ಲೇಶಂ ಚಿತ್ರದ ಮೂಲಕ ತೆಲುಗು ಸಿನಿಮಾಕ್ಕೆ ಪದಾರ್ಪಣೆ ಮಾಡಿದರು. ಇಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಬ್ರೇಕ್ ತಂದುಕೊಟ್ಟ ಚಿತ್ರ ಪುಷ್ಪ. ಇದರ ಬೆನ್ನಲ್ಲೇ ಅವರು, ಪಿಕ್ ಪಾಕೆಟ್, ವಿರಾಟ ಪರ್ವಂ ಮತ್ತು ಬುಟ್ಟ ಬೊಮ್ಮ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಸತ್ತಿ ಒರ್ದೆಕರಾಲು ಚಿತ್ರದ ಮೂಲಕ ನಾಯಕನಾಗಿ ಪ್ರವೇಶಿಸಿದ್ದಾರೆ.















