Coastal Bulletin

ಟರ್ಕಿ: ಭಾರೀ ಭೂಕಂಪ, ಧರೆಗುರುಳುತ್ತಿರುವ ಕಟ್ಟಡಗಳು , ಜೀವ ಉಳಿಸಿಕೊಳ್ಳಲು ಜನರ ಪರದಾಟ.. ಹೀಗೆ ಅಕ್ಷರಶಃ ಟರ್ಕಿ ಭೂಕಂಪದಿಂದಾಗಿ ನಲುಗಿ ಹೋಗಿದೆ. ಟರ್ಕಿಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಭೂಕಂಪ ಕಂಡುಬಂದಿದೆ. ಪರಿಣಾಮವಾಗಿ ಅನೇಕ ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಸೋಮವಾರ ಮುಂಜಾನೆ ಸಹ ದಕ್ಷಿಣ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಈ ದುರಂತದಲ್ಲಿ ಸುಮಾರು 4000 ಜನ ಸಾವನ್ನಪ್ಪಿರುವ ಬಗ್ಗೆ ವರದಿಗಳು ಬಹಿರಂಗಪಡಿಸಿವೆ.

ಟರ್ಕಿ ಮತ್ತು ಸಿರಿಯಾದಲ್ಲಿ ಹಲವಾರು ಕಟ್ಟಡಗಳು ನೆಲಕ್ಕುರುಳಿದ್ದು, ಇನ್ನೂ ಸಹ ಭೂಕಂಪನದಿಂದ ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾಗುವ ಆತಂಕವಿದೆ. ಅವಶೇಷಗಳ ತೆರವು ಕಾರ್ಯ ನಡೆದಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.ಭೂಕಂಪವು ಸ್ಥಳೀಯ ಕಾಲಮಾನ ಮುಂಜಾನೆ 04:17ಕ್ಕೆ (0117 GMT) ಸುಮಾರು 17.9 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಆರಂಭಿಕ ಭೂಕಂಪವು ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ನಗರದ ಪೂರ್ವಕ್ಕೆ 26 ಕಿಮೀ ದೂರದಲ್ಲಿ 17.9 ಕಿಮೀ ಆಳದಲ್ಲಿ ಸಂಭವಿಸಿದೆ.


ಮಲತ್ಯಾ ಪ್ರಾಂತ್ಯದಲ್ಲಿ 130 ಕಟ್ಟಡಗಳು ಭೂಕಂಪನದಿಂದ ಕುಸಿದು ಬಿದ್ದಿದ್ದರೆ, ದಿಯರ್‌ಬಕಿರ್‌ನಲ್ಲಿ 16 ಕಟ್ಟಡಗಳು ನೆಲಸಮವಾಗಿವೆ. ಅವಶೇಷಗಳಡಿ ಸಿಲುಕಿರುವ ಬದುಕುಳಿದವರಿಗಾಗಿ ಶೋಧ ಕಾರ್ಯ ತೀವ್ರಗತಿಯಲ್ಲಿ ಸಾಗುತ್ತಿದೆ.ಭೂಕಂಪದ ಕೇಂದ್ರದ ವಾಯುವ್ಯಕ್ಕೆ 460 ಕಿಮೀ ದೂರದಲ್ಲಿರುವ ಟರ್ಕಿಯ ರಾಜಧಾನಿ ಅಂಕಾರಾದಲ್ಲಿಯೂ ಕಂಪನದ ಅನುಭವವಾಗಿದೆ.

ಭೂಕಂಪದ ಹಿನ್ನೆಲೆಯಲ್ಲಿ, ಟರ್ಕಿಯ ಅಧಿಕಾರಿಗಳು ಅಂತರಾಷ್ಟ್ರೀಯ ಸಹಾಯಕ್ಕಾಗಿ ಕರೆ ನೀಡಿದ್ದಾರೆ. ಉತ್ತರ ಸಿರಿಯಾದಲ್ಲಿ, 99 ಜನರು ಸಾವನ್ನಪ್ಪಿದ್ದಾರೆ ಮತ್ತು 334 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಟ್ವಿಟರ್‌ನಲ್ಲಿ ಭೂಕಂಪನದಿಂದ ಸಂಭವಿಸುತ್ತಿರುವ ಅವಘಡಗಳ ಕುರಿತು ಹೆಚ್ಚಿನ ನಿಗಾ ವಹಿಸಲು ರಕ್ಷಣಾ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಇನ್ನು ಟರ್ಕಿಯ ಸಂಕಷ್ಟಕ್ಕೆ ಸ್ಪಂದಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು “ಟರ್ಕಿಯಲ್ಲಿ ಸಂಭವಿಸಿದ ಜೀವಹಾನಿ ಮತ್ತು ಆಸ್ತಿ ಹಾನಿಯಿಂದ ದುಃಖವಾಗಿದೆ.ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ ಮತ್ತು ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಭಾರತವು ಟರ್ಕಿಯ ಜನರೊಂದಿಗೆ ಇರುತ್ತದೆ ಮತ್ತು ಈ ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ” ಎಂದು ಟರ್ಕಿಯ ಜನತೆಗೆ ಧೈರ್ಯ ತುಂಬಿದ್ದು ಈಗಾಗಲೇ ಭಾರತ ಔಷಧ,ವೈದ್ಯಕೀಯ ತಂಡ,ರಕ್ಷಣಾ ಪಡೆಯನ್ನು ರವಾನಿಸಿದೆ.

Leave a Comment