Coastal Bulletin

ಬೆಂಗಳೂರು: ರಾಜ್ಯದ ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಮುಖ ನಾಲ್ಕು ಯೋಜನೆಗಳಿಗೆ ಚಾಲನೆ ನೀಡಿದರು. ಒಟ್ಟು ಅಂದಾಜು 2,700 ಕೋಟಿಗೂ ಹೆಚ್ಚು ಮೊತ್ತದ ರಾಜ್ಯಕ್ಕೆ ಹೆಮ್ಮೆ ತರುವ ಯೋಜನೆಗಳು ಲೋಕಾರ್ಪಣೆಗೊಂಡವು.

ಪ್ರಧಾನಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ಥಾವರ್ ಚೆಂದ್‌ ಗೆಹ್ಲೋಟ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲೂ ಸಹ ಹಲವು ದೇಶಗಳ ಇಂಧನ ಸಚಿವರು, ರಾಜ್ಯದ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಆಗಮಿಸಿದ್ದ ಜನರಿಗೆ, ಕಾರ್ಯಕರ್ತರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಮೊದಲು ಬೆಂಗಳೂರಿನ ಎಚ್‌ಎಎಲ್‌ಗೆ ಆಗಮಿಸಿ ಪ್ರಧಾನಮಂತ್ರಿ ಮೋದಿ ಬೆಳಗ್ಗೆ 11ಗಂಟೆಗೆ ಅಂತಾರಾಷ್ಟ್ರೀಯ ಇಂಧನ ಉದ್ಯಮ ಒಟ್ಟು ಗೂಡಿಸುವ ಮತ್ತು ಕೇಂದ್ರ ಸ್ಥಾನವನ್ನಾಗಿ ಭಾರತವನ್ನು ತೋರ್ಪಡಿಸುವ 'ಇಂಡಿಯಾ ಎನರ್ಜಿ ಸಪ್ತಾಹ' ಅನ್ನು ಉದ್ಘಾಟಿಸಿದರು. ಇದೊಂದು ವಿಶ್ವದ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಇಂಧನ ಕೈಗಾರಿಕಾ ತಜ್ಞರಿಗೆ ಸರ್ವಶ್ರೇಷ್ಠ ವೇದಿಕೆ ಆಗಿದೆ.


ಇದೇ ವೇಳೆ ತುಮಕೂರಿನಲ್ಲಿ ಭಾರತದ ಅತೀ ದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಲಘು ಉಪಯೋಗಿ ಹೆಲಿಕಾಪ್ಟರ್‌ಗಳು ಹಾಗೂ ಇಂಡಿಯನ್ ಮಲ್ಟಿರೋಲ್ ಹೆಲಿಕಾಪ್ಟರ್‌ಗಳು ತಯಾರಿಕೆ ಸ್ಥಳ ಗ್ರೀನ್ ಫಿಲ್ಡ್ ಹೆಲಿಕಾಪ್ಟರ್ ಕೈಗಾರಿಕೆಯಾಗಿ ಇದು ಹೊರ ಹೊಮ್ಮಲಿದೆ. ಇದರಿಂದ ಈ ಭಾಗದಲ್ಲಿ ಶಾಲಾ, ಕಾಲೇಜುಗಳಲ್ಲಿ ವಸತಿ ಪ್ರದೇಶಗಳ ಮೂಲಸೌಕರ್ಯ ದೊರೆಯಲಿದೆ. ಮುಖ್ಯವಾಗಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ.

ತುಮಕೂರು ಕೈಗಾರಿಕಾ ಟೌನ್‌ ಶಿಪ್ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ಕೈಗಾರಿಕೆ ಕೇಂದ್ರ ಉದ್ಘಾಟನೆಯಾಗಿದೆ. ಇದರಿಂದ 90 ಸಾವಿರ ಯುವಕರು/ ನಿರುದ್ಯೋಗಿ ಗಳಿಗೆ ಉದ್ಯೋಗ ದೊರೆಯಲಿದೆ. ಜೊತೆಗೆ ತುಮಕೂರಲ್ಲಿ 'ಜಲಜೀವನ್ ಮಿಷನ್ ಅಡಿ ಬಹುಗ್ರಾಮ ನೀರು ಸರಬರಾಜು ಯೋಜನೆ'ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಚಿಕ್ಕನಾಯಕನಹಳ್ಳಿಯ ಸುಮಾರು 147 ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಸಿಗುತ್ತದೆ. ನಿತ್ಯ ಸಂಸ್ಕರಿಸಿದ ಶುದ್ಧ ನೀರು ಜನರು ಸೇವಿಸುತ್ತಾರೆ. ಇಷ್ಟೆಲ್ಲ ಪ್ರಯೋಜನಗಳು ಇಂದಿನ ಪ್ರಧಾನಿ ಭೇಟಿ ನಂತರ ಧಕ್ಕಲಿವೆ.

Leave a Comment