ನವದೆಹಲಿ: ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಖಂಡಿಸಿದ್ದಾರೆ. ದೇಶವನ್ನು ಈಗಾಗಲೇ ವಿಭಜನೆ ಮಾಡಿದ್ದೀರಿ. ವಿಭಜನೆ ಮಾಡುತ್ತಲೇ ಆಡಳಿತ ನಡೆಸಿದ್ದೀರಿ. ದೇಶವನ್ನು ಇನ್ನೆಷ್ಟು ಭಾಗ ಮಾಡಲು ಹೊರಟಿದ್ದೀರಿ. ಒಬ್ಬ ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡುತ್ತಿದ್ದಾರೆ. ದೇಶವನ್ನು ಒಡೆದ ಮೇಲೂ ನಿಮಗೆ ತೃಪ್ತಿ ಇಲ್ಲವೇ ಎಂದು ಪ್ರದಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಈ ಮೂಲಕ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಕೂಗು ಹೇಳಿಕೆಯನ್ನು ಉಲ್ಲೇಖಿಸಿ ಮೋದಿ ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಹಾಗೂ ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶವನ್ನು ಇನ್ನೆಷ್ಟು ತುಂಡು ಮಾಡಬೇಕು ಎಂದುಕೊಂಡಿದ್ದೀರಿ ಎಂದು ಮೋದಿ ಪ್ರಶ್ನಿಸಿದ್ದಾರೆ. ಭಯೋತ್ಪಾದನೆ, ನಕ್ಸಲ್ ಆತಂಕ ಸೇರಿದಂತೆ ಯಾವುದೇ ದಾಳಿಯನ್ನು ಸಹಿಸುವುದಿಲ್ಲ. ಭಾರತೀಯ ಸೇನೆ ಗಡಿಯಲ್ಲಿ ಸಶಕ್ತವಾಗಿ ಹೋರಾಡುತ್ತಿದೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಾಗಬೇಕು. ರಾಜಕೀಯ ನಾಯಕರ ಚುಚ್ಚು ಮಾತಿನಿಂದ ಸೇನೆ ಆತ್ಮವಿಶ್ವಾಸ ಕುಗ್ಗಲಿದೆ ಅನ್ನೋ ಭಾವನೆ ಇದ್ದರೆ ನಿಮ್ಮ ಆಲೋಚನೆ ಬದಲಿಸಿ ಎಂದು ಮೋದಿ ಹೇಳಿದ್ದಾರೆ.. ಈಗಾಗಲೇ ಭಾರತವನ್ನು ಹೋಳು ಮಾಡಿದ್ದೀರಿ, ಇದೀಗ ಮತ್ತೆ ವಿಭಜನೆ ಬಗ್ಗೆ ಮಾತನಾಡುತ್ತಿದ್ದೀರಿ? ಇನ್ನೆಷ್ಟು ದಿನ ದೇಶ ವಿಭಜನೆ ಮಾಡುತ್ತಾ ಇರುತ್ತೀರಿ ಎಂದು ಪ್ರಧಾನಿ ಮೋದಿ ಸಂಸದ ಡಿಕೆ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕರ್ಪೂರಿ ಠಾಕೂರ್ಗೆ ಭಾರತ ರತ್ನವನ್ನು ನಮ್ಮ ಸರ್ಕಾರ ಘೋಷಣೆ ಮಾಡಿದೆ. ಸರ್ಕಾರದಲ್ಲಿ ಒಬಿಸಿ ಎಷ್ಟಿದ್ದಾರೆ ಎಂದು
ವಿಪಕ್ಷ ನಾಯಕರು ಕೇಳುತ್ತಿದ್ದಾರೆ. ಅವರಿಗೆ ಅತೀ ದೊಡ್ಡ ಒಬಿಸಿ ನಾಯಕ ಎದುರುಗಡೆ ಇರುವುದು ಕಾಣುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ. ಯುಪಿಎ ಅವಧಿಯಲ್ಲಿ ಹೆಚ್ಚುವರಿ ಸಂವಿಧಾನೇತರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ ಒಂದೇ ಒಂದು ಒಬಿಸಿ ಪ್ರತಿನಿಧಿಸುವವರು ಇರಲಿಲ್ಲ ಎಂದು ಮೋದಿ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಒಬಿಸಿ ನಾಯಕರಿಗೆ ಅಪಮಾನ ಮಾಡಿದೆ. ಅವಕಾಶವನ್ನೂ ಕಲ್ಪಿಸಲಿಲ್ಲ, ಬೆಳೆಯಲೂ ಬಿಡಲಿಲ್ಲ ಎಂದು ಮೋದಿ ಹೇಳಿದ್ದಾರೆ.
ರೈತರ ಮೇಲೆ ಯಾವೆಲ್ಲಾ ದೌರ್ಜನ್ಯ ನಡೆದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ 10 ವರ್ಷದ ಆಡಳಿತದಲ್ಲಿ 25 ಸಾವಿರ ಕೋಟಿ ಅನುದಾನ ರೈತರಿಗೆ ನೀಡಿದ್ದರು. ನಮ್ಮ ಅವಧಿಯಲ್ಲಿ 1.25 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ. 2019ರ ಚುನಾವಣೆ ಬಳಿಕ ಮೋದಿ ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸುತ್ತಾರೆ ಎಂದು ಸುಳ್ಳುಗಳನ್ನು ರೈತರ ತಲೆಯಲ್ಲಿ ತುಂಬಲಾಗಿತ್ತು. ಇದೇ ಮೊದಲ ಬಾರಿಗೆ ಮತ್ಸ ಸಂಪದ ಜಾರಿಗೆ ತರಲಾಗಿದೆ ಎಂದು ಮೋದಿ ಹೇಳಿದ್ದಾರೆ.










