ಮತ್ತೆ ಹೊಸ ವರ್ಷ ಬಂದಿದೆ . ಹೊಸ ಭರವಸೆಯಿಂದ ಹೊಸ ವರುಷಕ್ಕೆ ಕಾಲಿಡುತ್ತಿದ್ದೇವೆ. ಹೊಸ ಕನಸು... ಹೊಸ ಹುರುಪು... ಹೊಸ ಭರವಸೆ... ಹೊಸ ಗುರಿ... ಹೊಸ ಸಾಹಸ... ಹೀಗೆ ನಮ್ಮ ಬಾಳಲ್ಲಿ ಹೊಸತನವನ್ನು ಹೊತ್ತು ತರುವ ಹೊಸ ವರ್ಷ ಮತ್ತೆ ಬಂದಿದೆ. ಇದು 2021ಕ್ಕೆ ವಿದಾಯ ಹೇಳಿ 2022ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಕ್ಷಣ.
ಕಳೆದ ವರ್ಷದ ಸುಂದರ ನೆನಪುಗಳನ್ನು ನೆನೆಯುತ್ತಾ, ಜೀವನದಲ್ಲಿ ಕಲಿತ ಪಾಠವನ್ನು ಅನುಸರಿಸುತ್ತಾ , ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಹೊತ್ತುಕೊಂಡು ಹೆಜ್ಜೆ ಇಡುವ ಸಂತಸದ ಕ್ಷಣ ಇದಾಗಿದೆ.
ಹೊಸ ಕ್ಯಾಲೆಂಡರ್ ಬದಲು ಮಾಡಿದ ರೀತಿಯಲ್ಲಿ ಜೀವನದಲ್ಲಿ ಇದ್ದ ಕಹಿ ನೆನಪುಗಳನ್ನು ಮರೆತು ಅದರಲ್ಲಿ ಕಲಿತ ಪಾಠಗಳನ್ನು ನೆನಪಿನಲ್ಲಿಟ್ಟುಕೊಂಡು ಮುಂದೆ ಸಾಗುವುದು ಉತ್ತಮ.
2021ವರುಷದಲ್ಲಿ ನಮ್ಮ ಜೀವನದಲ್ಲಿ ಆದ ಪ್ರತಿಯೊಂದು ಸಂಗತಿಗಳನ್ನು ಒಮ್ಮೆ ಮೆಲುಕು ಹಾಕುವುದು ಕೂಡ ಅಗತ್ಯ.
ಈ ವರುಷ ಶುರುವಾದಾಗ ಸಿಕ್ಕ ಪ್ರೀತಿ, ಸ್ನೇಹ ಇವೆಲ್ಲವೂ
ಈ ವರುಷದ ಕೊನೆಯವರೆಗೂ ಜೊತೆಗೆ ಇದೆಯಾ ಎನ್ನುವುದನ್ನು ನೆನಪಿಸುವುದು ಕೂಡ ಮುಖ್ಯವೇ ಆಗಿದೆ.ಏನೇ ಇರಲಿ
ಮತ್ತೆ ನಮ್ಮ ಬಾಳಲ್ಲಿ ಅಮೂಲ್ಯವಾದ 365 ದಿನಗಳು ಬರುತ್ತಿವೆ ಅದನ್ನು ನಗುಮುಖದಿಂದ ಸ್ವಾಗತಿಸುತ್ತಾ, ಸಿಗುವ ದಿನಗಳನ್ನು ಜೀವನದ ಏಳಿಗೆಗಾಗಿ ಕಳೆಯೋಣ .
ನಾಡಿನ ಸಮಸ್ತ ಜನತೆಗೆ ಹೊಸ ವರುಷದ ಶುಭಾಶಯಗಳು
- ಮಧುಮಿತ,ಕಡಂಬು














