ತಿರುವನಂತಪುರ: ಸಿಪಿಎಂ ನಾಯಕ ಸಾಜಿ ಚೆರಿಯನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರದಲ್ಲಿ ಮತ್ತೆ ಸಚಿವರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು.
ಸಂವಿಧಾನದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರೆಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಆರು ತಿಂಗಳ ಹಿಂದೆ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.
ಚೆರಿಯನ್ ಅವರಿಗೆ ರಾಜಭವನದಲ್ಲಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪ್ರಮಾಣವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಸ್ಪೀಕರ್ ಶಂಸೀರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಪುಟ ಸದಸ್ಯರು, ಆಡಳಿತರೂಢ ಎಲ್‌ಡಿಎಫ್‌ನ ಕೆಲವು ಶಾಸಕರು ಮತ್ತು ಎಡಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.
ಸಮಾರಂಭದ ನಂತರ ಚೆರಿಯನ್ ಅವರು ರಾಜಭವನದಲ್ಲಿ ರಾಜ್ಯಪಾಲರು ಆಯೋಜಿಸಿದ್ದ ಚಹಾ ಕೂಟದಲ್ಲಿ ಭಾಗವಹಿಸಿ,
ತಮ್ಮ ಹಳೆ ಕಚೇರಿಗೆ ತೆರಳಿದರು. ಜೊತೆಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ಮತ್ತೆ ಮೊದಲು ಹೊಂದಿದ್ದ ಖಾತೆಯನ್ನೇ ಪಡೆಯುವುದಾಗಿ ಭರವಸೆ ವ್ಯಕ್ತಪಡಿಸಿದರು.
ಕೇರಳದ ಮೀನುಗಾರಿಕೆ, ಯುವಜನ ಮತ್ತು ಸಂಸ್ಕೃತಿ ಖಾತೆಗೆ ಆರು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು.
ಚೆರಿಯನ್ ಮರುನೇಮಕವನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಭಟನೆಯನ್ನು ನಡೆಸಿದರು. ಅನೇಕ ಕಾಂಗ್ರೆಸ್ ಹೋರಾಟಗಾರರು ರಾಜಭವನದವರೆಗೆ ರ‍್ಯಾಲಿ ನಡೆಸಿದರು. ಜೊತೆಗೆ ಪಕ್ಷವು ಈಡೀ ರಾಜ್ಯಾದ್ಯಂತ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿರೋಧ ಪಕ್ಷದವರು ಸಿಪಿಎಂನ ಈ ನಿರ್ಧಾರವನ್ನು ವಿರೋಧಿಸಿದ್ದಾರೆ.














