ತಿರುವನಂತಪುರಂ : ಭಯೋತ್ಪಾದನೆಗೆ ನೆರವು, ಉಗ್ರ ಕೃತ್ಯಕ್ಕೆ ಹಣ ಸಂಗ್ರಹ ಸೇರಿದಂತೆ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಮೇಲೆ ದೇಶಾದ್ಯಂತ ದಾಳಿ ನಡೆದಿದೆ.
ರಾಷ್ಟ್ರೀಯ ತನಿಖಾ ದಳ 15 ರಾಜ್ಯಗಳ 93 ಸ್ಥಳಗಳ ಮೇಲೆ ದಾಳಿ ಮಾಡಿದೆ. 100ಕ್ಕೂ ಹೆಚ್ಚು ನಾಯಕರು, ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ದಾಳಿಯನ್ನು ವಿರೋಧಿಸಿ ಪಿಎಫ್ಐ, ಎಸ್‌ಡಿಪಿಐ ದೇಶಾದ್ಯಂತ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆ ವೇಳೆ ಹಿಂಸಾಚಾರ, ಗಲಭೆಯೂ ನಡೆದಿದೆ. ಪ್ರಮುಖವಾಗಿ ಕೇರಳದಲ್ಲಿ ಅತೀ ಹೆಚ್ಚು ಅನಾಹುತಗಳಾಗಿವೆ. ಕೇರಳ ಸಾರಿಗೆ ಸಂಸ್ಥೆ ಬಸ್ ಮೇಲೆ ದಾಳಿ ಪುಡಿ ಪುಡಿ ಮಾಡಿದ್ದಾರೆ. ಹಲವು ಬಸ್‌ಗೆ ಬೆಂಕಿ ಹಚ್ಚಲಾಗಿದೆ. ಈ ಪ್ರತಿಭಟನೆಯಲ್ಲಿ ಕೇರಳ ಸಾರಿಗೆ ಸಂಸ್ಥೆಗೆ ಬರೋಬ್ಬರಿ 5 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಈ ಮೊತ್ತ ಭರಿಸುವಂತೆ
ಕೇರಳ ಸಾರಿಗ ಸಂಸ್ಥೆ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸೆಪ್ಟೆಂಬರ್ 23 ರಂದು ದೇಶಾದ್ಯಂತ ಪ್ರತಿಭಟೆನೆ(PFI Protest) ಮಾಡಿತ್ತು. ಆದರೆ ಕೇರಳದಲ್ಲಿ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ವೇಳೆ ಅತೀ ಹೆಚ್ಚು ಬಸ್‌ಗಳು(KSRTC) ಧ್ವಂಸಗೊಂಡಿತ್ತು. ಬೆಂಕಿ ಹಚ್ಚಿ ಬಸ್ ಮೇಲೆ ಆಕ್ರೋಶ ಹೊರಹಾಕಲಾಗಿತ್ತು. ಇದರಿಂದ ಕೇರಳ ಸಾರಿಗೆ ಸಂಸ್ಥೆ 5.06 ಕೋಟಿ ರೂಪಾಯಿ ನಷ್ಟವಾಗಿದೆ. ಇದೀಗ ಪಿಎಫ್ಐ ವಿರುದ್ಧ ಕೇರಳ ಸಾರಿಗೆ ಸಂಸ್ಥೆ ಕೇರಳ ಹೈಕೋರ್ಟ್‌ನಲ್ಲಿ(Kerala High Court) ಈ ಸಂಪೂರ್ಣ ಮೊತ್ತವನ್ನು ಪಿಎಫ್ಐ ಭರಿಸಬೇಕು ಎಂದು ಮನವಿ ಮಾಡಿಕೊಂಡಿದೆ.














