ಕಾಸರಗೋಡು: ಅಡೂರಿನಲ್ಲಿ ದೈವಕಲಾವಿದನ ಕೊಲೆ- ಆರೋಪಿ ಬಂಧನ

Coastal Bulletin
ಕಾಸರಗೋಡು: ಅಡೂರಿನಲ್ಲಿ ದೈವಕಲಾವಿದನ ಕೊಲೆ- ಆರೋಪಿ ಬಂಧನ

ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರಿನಲ್ಲಿ ದೈವ ಕಲಾವಿದನ ಕೊಲೆ ಮಾಡಲಾಗಿದೆ. ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ.ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್‌ರ ಮೇಲ್ನೋಟ ದಲ್ಲಿ ಬೇಡಗಂ ಪೊಲೀಸ್ ಇನ್‌ಸ್ಪೆಕ್ಟರ್ ರಾಜೀವನ್ ವಲಿಯವಳಪ್ಪಿಲ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ

ಉರುಡೂರು ಬಳಿಯ ಚಂದನ ಕ್ಯಾಡ್ ಎಂಬಲ್ಲಿನ ದೈವ ಕಲಾವಿದ ನಾದ ಟಿ. ಸತೀಶನ್ ಯಾನೆ ಬಿಜು (46) ಎಂಬವರು ಕಳೆದ ಮಂಗಳವಾರ ಸಂಜೆ ನೆರೆಮನೆ ನಿವಾಸಿ ಚೋಮಣ್ಣ ನಾಯ್ಕರ ಮನೆ ವರಾಂಡದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದರು.

ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಸತೀಶನ್‌ರ ಸಾವಿನ ಬಗ್ಗೆ ನಿಗೂಢತೆ ಹುಟ್ಟಿಕೊಂಡಿತು. ಮೃತದೇಹದ ಬಾಹ್ಯ ಭಾಗದಲ್ಲಿ ಗಾಯಗಳು ಕಂಡುಬಂದಿರಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಎಲುಬು ಮುರಿತಕ್ಕೊಳಗಾಗಿರುವುದು ತಿಳಿದುಬಂದಿದೆ. ದೇಹದ ಹಿಂಭಾಗ ಹಾಗೂ ಆಂತರಿಕ ಗಾಯಗಳು ಕಂಡು ಬಂದಿವೆ. ಈ ವಿಷಯವನ್ನು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಅನಂತರ ಡಿವೈಎಸ್ಪಿ ಮನೋಜ್‌ರ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಸತೀಶನ್‌ರ ಸಾವು ಕೊಲೆಯಾಗಿದೆಯೆಂದು ತಿಳಿದುಬಂದಿದೆ. ಕೊಲೆ ಕೃತ್ಯದ ಕುರಿತು ಪೊಲೀಸ್ ಮೂಲಗಳು ಪ್ರಕಾರ ಸತೀಶನ್ ಹಾಗೂ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಚಂದನಕ್ಕಾಡ್‌ನ ಚಿದಾನಂದ ಸ್ನೇಹಿತರಾಗಿದ್ದಾರೆ. ಈ ಇಬ್ಬರು ನಿರಂತರ ನೆರೆಮನೆ ನಿವಾಸಿಯಾದ ಚೋಮಣ್ಣ ನಾಯ್ಕರ ಮನೆಯಲ್ಲಿ ಮದ್ಯ ಸೇವಿಸುವುದಿದೆ. ಸೋಮವಾರ ಮಧ್ಯಾಹ್ನ ಆ ಮನೆಗೆ ತಲುಪಿದ ಅವರಿಬ್ಬರು ವರಾಂಡದಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ. ಮನೆ ಮಾಲಕನಿಗೂ ಮದ್ಯ ನೀಡಿದ್ದಾರೆ. ಅನಂತರ ಮದ್ಯದಮಲಿನಲ್ಲಿ ಸತೀಶನ್ ಹಾಗೂ ಚಿದಾನಂದರ ಮಧ್ಯೆ ವಾಗ್ವಾದವುಂಟಾಯಿತು. ವಾಗ್ವಾದ ತೀವ್ರಗೊಂಡಾಗ

ಕುಳಿತಿದ್ದ ಸತೀಶನ್ ರನ್ನು ಹಿಂದಿನಿಂದ ದೂಡಿ ಕೆಳಕ್ಕೆ ಹಾಕಲಾಗಿದೆ. ಈ ವೇಳೆ ತಲೆ ನೆಲಕ್ಕೆ ಬಡಿದು ಬಿದ್ದ ಸತೀಶನ್‌ರನ್ನು ಬೇರೊಬ್ಬರ ಸಹಾಯದೊಂದಿಗೆ ಎತ್ತಿ ಕೊಂಡೊಯ್ದು ವರಾಂಡದಲ್ಲಿ ಮಲಗಿಸಲಾಯಿತು.

ನೋವಾಗುತ್ತಿದೆಯೆಂದು ಸತೀಶನ್ ತಿಳಿಸಿದಾಗ ಮೂವ್ ಎಂಬ ಮುಲಾಮು ಹಚ್ಚಲಾಯಿತು. ಅನಂತರ ನೋವಿಗಿರುವ ಮಾತ್ರೆಗಳನ್ನು ಅವರು ನೀಡಿದರು. ಈ ಮಧ್ಯೆ ಸತೀಶನ್ ಅರೆಪ್ರಜ್ಞಾವಸ್ಥೆಗೆ ತಲುಪಿದರು. ಅದನ್ನು ಅವರು ನಿದ್ರಿಸಿರುವುದಾಗಿ ಭಾವಿಸಿ ಚಿದಾನಂದ ಅಲ್ಲಿಂದ ಮರಳಿದ್ದರು.

ಮಂಗಳವಾರವೂ ಸತೀಶನ್ ಮನೆಗೆ ತಲುಪದುದರಿಂದ ಸಹೋದರಿ ಸೌಮಿನಿ ಫೋನ್ ಕರೆ ಮಾಡಿದಾಗ ಕರೆ ಸ್ವೀಕರಿಸಲಾಗಿತ್ತು. ಆದರೆ ಏನು ಹೇಳಿದರೆಂದು ಸ್ಪಷ್ಟಗೊಂಡಿರಲಿಲ್ಲ.

ಇದರಿಂದ ಸತೀಶನ್ ಮದ್ಯದಮಲಿನಲ್ಲಿದ್ದಿರ ಬಹುದೆಂದು ಸಹೋದರಿ ಭಾವಿಸಿದ್ದರು. ಮಂಗಳವಾರ ಸಂಜೆಯಾದರೂ ಸಹೋದರನನ್ನು ಕಾಣದೇ ಇದ್ದಾಗ ಸೌಮಿನಿ ನೆರೆಮನೆ ನಿವಾಸಿಯಾದ ಚೋಮಣ್ಣ ನಾಯ್ಕರ ಮನೆಗೆ ಹೋದರು. ಈ ವೇಳೆ ಸತೀಶನ್ ಮನೆ ವರಾಂಡದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿರುವುದು ಕಂಡುಬಂದಿದೆ. ನೆರೆಮನೆ ನಿವಾಸಿಗಳ ಸಹಾಯದೊಂದಿಗೆ ಸತೀಶನ್‌ರನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಹೇಳಿಕೆ ದಾಖಲಿಸಿಕೊಂಡ ಬಳಿಕ ಡಿವೈಎಸ್ಪಿ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಯ ಕುರಿತು ಮಾಹಿತಿ ಲಭಿಸಿದೆ.

ಮರಣೋತ್ತರ ಪರೀಕ್ಷೆಯ ವೇಳೆಯೋ, ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲೋ ಚಿದಾನಂದ ಭಾಗವಹಿಸಿರಲಿಲ್ಲವೆಂದು ಪೊಲೀಸರಿಗೆ ತಿಳಿದುಬಂದಿತ್ತು. ಸಂಶಯದ ಆಧಾರದಲ್ಲಿ ಆತನನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದಾಗ ಘಟನೆಯ ಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಮನಪೂರ್ವವಲ್ಲದ ನರಹತ್ಯೆ ಪ್ರಕರಣ ದಾಖಲಿಸಿ ಚಿದಾನಂದನನ್ನು ಬಂಧಿಸಲಾಗಿದೆಯೆಂದು ಮಾಹಿತಿಯಿದೆ.

Leave a Comment