ಬಂಟ್ವಾಳ: ಭಾರತ ಸರಕಾರ ಇತ್ತಿಚೆಗೆ 2025ರ ನವೆಂಬರ್ 21ರಂದು ಸುಮಾರು 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4(ಕೋಡ್) ಸಂಹಿತೆಗಳನ್ನು ತಂದರು. ಆ ಕೋಡ್ ಗಳನ್ನು ತರುವುದರ ಮೂಲಕ ಭಾರತದ ಎಲ್ಲಾ ಕಾರ್ಮಿಕರಿಗೂ ಬಹಳಷ್ಟು ದೊಡ್ಡ ಅನುಕೂಲವಾಗಲಿದೆ ಮತ್ತು ಎಲ್ಲಾ ಕಾರ್ಮಿಕರನ್ನೂ ಕಾನೂನುಗಳ ವ್ಯಾಪ್ತಿಗೆ ತರುತ್ತೇವೆ ಅಂತ ಹೇಳಲಾಯಿತು. ಆದರೆ ಅಸಲಿಗೆ ಇದು ಅಪ್ಪಟ ಸುಳ್ಳು. ಇದರಿಂದಾಗಿ ಕಾರ್ಮಿಕರು ಕನಿಷ್ಟ ವೇತನದಿಂದ ವಂಚಿತರಾಗುವುದು ಮಾತ್ರವಲ್ಲ ಪ್ರತಿಭಟನೆಯ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಐತಿಹಾಸಿಕ ಹೋರಾಟಗಳಿಂದ ಗಳಿಸಿದಂತಹ ಕಾನೂನು ಬದ್ಧ ಸವಲತ್ತುಗಳು ನಾಶವಾಗಲಿದೆ. ಎಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಅಭಿಪ್ರಾಯಪಟ್ಟರು.
ಅವರು ಇಂದು ಬಿಸಿರೋಡಿನ ಸಿಪಿಐ ಸಭಾಭವನದಲ್ಲಿ ಜರುಗಿದೆ ಮೇ ದಿನಾಚರಣೆ-2026 ಸಭೆಯನ್ನುದ್ದೇಶಿಸಿ ಮಾತನಾಡಿ ಬಂಡವಾಳಗಾರರು ತಮ್ಮ ಲಾಭದ ಮೌಲ್ಯಗಳ ಉಳಿಕೆಗಾಗಿ ಎಲ್ಲಾಕೆಲಸಗಳನ್ನು ಖಾಯಂ ಅಲ್ಲದ ಕೆಲಸಗಳಾಗಿ ದುಡಿಸಿಕೊಳ್ಳುತ್ತಿದ್ದಾರೆ. ಅದೇ ಹಾದಿಯಲ್ಲಿ ಈಗ ಸರಕಾರ ಸಾಗುತ್ತಿದೆ. ಇದು ಅಕ್ಷರಶ: ಪ್ರಜಾ ಪ್ರಭುತ್ವ
ವ್ಯವಸ್ಥೆಯಲ್ಲಿ ದುಡಿಯುವ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವಂತಹ ಪ್ರಯತ್ನ ಎಂದರು. ಕಾರ್ಮಿಕರ ಹಿತಾಸಕ್ತಿಯುಳ್ಳ ಕೇರಳ ತಮಿಳುನಾಡು ಸರಕಾರಗಳು ಈ ಕೋಡ್ ತಿರಸ್ಕರಿಸಿವೆ. ಕರ್ನಾಟಕ ಸರಕಾರದ ಮುಂದೆ ಕೋಡ್ ಜ್ಯಾರಿ ಮಾಡದಂತೆ ಕಾರ್ಮಿಕವರ್ಗ ಆಗ್ರಹಿಸದರೂ ಸರಕಾರ ಮೌನವಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಕೋಡ್ ನ್ನು ಜ್ಯಾರಿಗೊಳಿಸಬಾರದು ಎಂದರು.
ಜಗತ್ತಿಗೆ ಮಾರಕವಾದ ಯುದ್ಧ ಬೇಡ:
ಎರಡು ದೇಶಗಳ ನಡುವಿನ ಯುದ್ಧ ಅಂತ ಹಗುರವಾಗಿ ಪರಿಗಣಿಸಬಾರದು.ಯುದ್ಧದಿಂದಾಗಿ ಪ್ರಪಂಚದ ಅಭಿವೃದ್ಧಿ ಹೊಂದುತ್ತಿರುವ
ದೇಶಗಳ ಮೇಲೆ ಅತ್ಯಂತ ದೊಡ್ಡ ಪರಿಣಾಮ ಬೀಳುತ್ತದೆ. ಯುದ್ಧದಿಂದ ಜನಸಾಮಾನ್ಯರ ಮಾರಣ ಹೋಮ ಆಗುತ್ತದೆ. ಸಾವಿರಾರು ಸೈನಿಕರು ಸಾಯುತ್ತಾರೆ. ಬರ ಬರುತ್ತದೆ, ಮೂಲ ಸೌಕರ್ಯಗಳ ಕೊರತೆ ಯಾಗುತ್ತದೆ,ಆಹಾರದ ಅಭಾವ ಹೆಚ್ಚಾಗುತ್ತದೆ. ಪರಿಸರ ನಾಶವಾಗುತ್ತದೆ.ಅಪಾರ ಸಾವುನೋವುಗಳು ಸಂಭವಿಸುತ್ತದೆ. ತೈಲ ಕೊರತೆ ಯಾಗುತ್ತದೆ. ಒಟ್ಟಾರೆಯಾಗಿ ದೇಶದ ಆರ್ಥಿಕತೆಗೆ ಬಹಳ ದೊಡ್ಡ ಹೊಡೆತ ಬೀಳುತ್ತದೆ ಎಂದು ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ ಕುಮಾರ್ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಬಿ.ಬಾಬು ಭಂಡಾರಿ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ನಾಯಕಿ ಭಾರತಿ ಪ್ರಶಾಂತ್, ಮಾನವ ಬಂಧುತ್ವ ವೇದಿಕೆಯ ಬಂಟ್ವಾಳ ಸಹಸಂಚಾಲಕ ಮ್ಯಾಕ್ಷಿಂ ಡಿಸೋಜಾ, ಎಐವೈಎಫ್ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೇಮನಾಥ ಕೆ. ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪ್ರೇಮನಾಥ ಕೆ. ಸ್ವಾಗತಿಸಿ,ಕೊನೆಯಲ್ಲಿ ಮಹಿಳಾ ಒಕ್ಕೂಟದ ನಾಯ ಕಿಶಮಿತಾ ವಂದಿಸಿದರು.














