ಬಂಟ್ವಾಳ: ಫರಂಗಿಪೇಟೆ ಕಲ್ಲತಡಮೆ ಕೆರೆಬಿತ್ತಿಲು ಶ್ರೀ ರಕ್ತೇಶ್ವರೀ ಜುಮಾದಿ ಬಂಟ, ಮೈಸಂದಾಯ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಆಲಯದಲ್ಲಿ ಶ್ರೀ ದೈವಗಳ ಪುನಃ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ಹಾಗೂ ನೇಮ ಮೇ 7 ಹಾಗೂ 8ರಂದು ನಡೆಯಲಿದೆ.
ಕ್ಷೇತ್ರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ಪ್ರಮುಖರಾದ ಸಂದೀಪ್ ನಾಯಕ್ ಸುಜೀರ್ ಅವರು, ಮೇ 7ರಂದು ಸಂಜೆ 6.30ರಿಂದ ಪ್ರಸಾದ ಪರಿಗ್ರಹ, ಸಾಮೂಹಿಕ ಪ್ರಾರ್ಥನೆ, ವಾಸ್ತು ಹೋಮ, ವಾಸ್ತು ಪೂಜೆ, ಮಂಚ ಬಿಂಬಗಳ ಶುದ್ದಿ ಸಹಿತ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದರು.
ಮೇ 8ರಂದು ಮುಂಜಾನೆ 6ರಿಂದ ಪುಣ್ಯಾಹ, ಗಣಪತಿ ಹೋಮ, ಕಲಶ ಪೂಜೆ, ಕಲಶಾಧಿವಾಸ, ಹೋಮಗಳು, ರಕ್ತೇಶ್ವರೀ ಸನ್ನಿಧಾನದಲ್ಲಿ ಕಲಶಪೂಜೆ, ಅಧಿವಾಸ ಪೂಜೆ, ಪ್ರತಿಷ್ಠಾ ಹೋಮ ನಡೆಯಲಿದೆ. 8.40ರ ಮಿಥುನ ಲಗ್ನದಲ್ಲಿ ಶ್ರೀ ರಕ್ತೇಶ್ವರೀ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಸಾನಿಧ್ಯ ಕಲಶಾಭಿಷೇಕ, ಪರ್ವಪೂಜೆ ಹಾಗೂ ಮಹಾಪೂಜೆ, 9.55ಕ್ಕೆ ಜುಮಾದಿ ಬಂಟ ಹಾಗೂ ಮೈಸಂದಾಯ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪಲ್ಲಪೂಜೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಧಾರ್ಮಿಕ ಸಭೆ ನಡೆಯಲಿದೆ. ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಅಂದು ಮಧ್ಯಾಹ್ನ 2 ರಿಂದ 4ರವರೆಗೆ
ದಾಸನಮನ ಬಳಗ ಮಂಗಳೂರು ಅವರಿಂದ ಭಜನ್ ಗಂಗಾ, ಸಂಜೆ 4ರಿಂದ 7ರವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ಶ್ರೀ ಜುಮಾದಿ ಬಂಟ, ಮೈಸಂದಾಯ ದೈವಗಳಿಗೆ ನೇಮ ನಡೆಯಲಿದೆ. ಮೇ 8ರಂದು ರಾತ್ರಿ ನಡೆಯುವ ನೇಮಕ್ಕೆ ಸುಜೀರುಗುತ್ತು ಶ್ರೀ ಅರಸು ವೈದ್ಯನಾಥ ಜುಮಾದಿ ಬಂಟ ದೈವಸ್ಥಾನದ ಭಂಡಾರ ಮನೆಯಿಂದ ಜುಮಾದಿ ಬಂಟ ದೈವಗಳ ಭಂಡಾರ ಅದೇ ದಿನ ಆಗಮಿಸಿ ಮರುದಿನ ಪ್ರಾತಃಕಾಲ ನಿರ್ಗಮಿಸಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಸುರೇಶ್ ನಾಯಕ್ ಸುಜೀರ್ ಮಂಗಳೂರು, ಸುಂದರ ಶೆಟ್ಟಿ ಕಲ್ಲತಡಮೆ, ಪ್ರಧಾನ ಕಾರ್ಯದರ್ಶಿ ಕೆ.ಜಿ.ವಿಠಲ ಆಳ್ವ ಗರೋಡಿ ಮನೆ, ಕೋಶಾಧಿಕಾರಿ ಆನಂದ ಆಳ್ವ ಗರೋಡಿ ಮನೆ, ಗೌರವ ಸಲಹೆಗಾರ ಸಂಜೀವ ಹೆಗ್ಡೆ ಗರೋಡಿ ಮನೆ, ಪ್ರಮುಖರಾದ ಮೋಹನ್ ನಾಯಕ್ , ವೇದವ್ಯಾಸ ನಾಯಕ್, ವರದರಾಜ್ ನಾಯಕ್, ಸುಜೀರ್ ಕಲ್ಲತಡಮೆ, ಚಂದ್ರಶೇಖರ ಪೂಜಾರಿ ತೆಕ್ಕಿಹಿತ್ಲು, ಕಿರಣ್ ರಾಜ್ ಕುಂಪಣಮಜಲು ಮುಂತಾದವರು ಉಪಸ್ಥಿತರಿದ್ದರು.














