ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!

Coastal Bulletin
ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!

ಶಿವಮೊಗ್ಗ: ಪತಿಯ ಅನೈತಿಕ ಸಂಬಂಧ ಹಾಗೂ ದೈಹಿಕ-ಮಾನಸಿಕ ಹಿಂಸೆಯಿಂದ ಬೇಸತ್ತ ಬಿಜೆಪಿ (BJP) ಮುಖಂಡನ ಪತ್ನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಬಗ್ಗೆ ಮೃತಳ ತಾಯಿ ಸೊರಬ ಪೋಲೀಸರಿಗೆ ದೂರು ನೀಡಿದ್ದು, ಇದರ ಆಧಾರದಲ್ಲಿ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿಯನ್ನು ಬಂಧಿಸಲಾಗಿದೆ. ಅಲ್ಲದೆ, ಪ್ರಭು ಮೇಸ್ತ್ರಿಯ ಹಲವು ವಿಚಾರಗಳು ಬೆಳಕಿಗೆ ಬಂದಿವೆ.

ಸೊರಬ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಎಂಬಾತನ ಪತ್ನಿ ಮಂಜುಳಾ, ಪತಿಯ ನಡತೆಯಿಂದ ಮನನೊಂದಿದ್ದರು. ಪ್ರಭು ಮೇಸ್ತ್ರಿ ತನ್ನ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪವಿದೆ. ಈ ಸಂಬಂಧವನ್ನು ಬಿಟ್ಟುಬಿಡುವಂತೆ ಹಿರಿಯರು ಮತ್ತು ಸಂಬಂಧಿಕರು ಹಲವು ಬಾರಿ ಬುದ್ಧಿಮಾತು ಹೇಳಿದ್ದರೂ, ಪ್ರಭು ಅದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಇದೇ ವಿಚಾರವಾಗಿ ಪತ್ನಿ ಮಂಜುಳಾ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ.

ಎರಡು ಮದುವೆಯಾಗಿದ್ದ ಪ್ರಭು

ಮೇಸ್ತ್ರಿ, ಮೂರನೇಯವಳೊಂದಿಗೆ ಸಂಬಂಧ!

ಪ್ರಭು ಮೇಸ್ತ್ರಿ ಈ ಮೊದಲು ಕೇರಳ ಮೂಲದ ಮಹಿಳೆಯನ್ನು ವಿವಾಹವಾಗಿದ್ದು, ಆಕೆಯನ್ನು ತೊರೆದಿದ್ದ. ನಂತರ ಮಂಜುಳಾ ಅವರೊಂದಿಗೆ ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿ ಪತಿಯನ್ನು ಬಿಟ್ಟು ತವರಿಗೆ ತೆರಳಿದ್ದರೆ, ಎರಡನೇ ಪತ್ನಿ ಮಂಜುಳಾ ಮನೆಯ ಹಿಂಭಾಗದ ಮರದ ತೊಲೆಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಭು ಮೇಸ್ತ್ರಿ ಈ ಹಿಂದೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ. ಮೃತಳ ತಾಯಿ ಶೋಭಾ ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸರು ಸದ್ಯ ಪ್ರಭು ಮೇಸ್ತ್ರಿಯನ್ನು ಬಂಧಿಸಿದ್ದಾರೆ.

Leave a Comment