breaking news

ನೈಜೀರಿಯಾದಲ್ಲಿ ಕ್ರೈಸ್ತರ ನರಮೇಧ – ಉಗ್ರರ ಮೇಲೆ ಅಮೆರಿಕ ಬಾಂಬ್‌ ದಾಳಿ

Coastal Bulletin
ನೈಜೀರಿಯಾದಲ್ಲಿ ಕ್ರೈಸ್ತರ ನರಮೇಧ – ಉಗ್ರರ ಮೇಲೆ ಅಮೆರಿಕ ಬಾಂಬ್‌ ದಾಳಿ

ವಾಷಿಂಗ್ಟನ್‌: ನೈಜೀರಿಯಾದಲ್ಲಿರುವ (Nigeria) ಐಸಿಸ್‌ ಉಗ್ರರನ್ನು ಗುರಿಯಾಗಿಸಿಕೊಂಡು ಅಮೆರಿಕ (USA) ಬಾಂಬ್‌ ದಾಳಿ ನಡೆಸಿದೆ. ಕ್ರೈಸ್ತರನ್ನು(Christians) ಗುರಿಯಾಗಿಸಿ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಏರ್‌ಸ್ಟ್ರೈಕ್‌ ಮಾಡಲಾಗಿದೆ ಎಂದು ಅಮೆರಿಕ ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದೆ.

ತಮ್ಮ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಬಾಂಬ್‌ ದಾಳಿ ನಡೆಸಿದ್ದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇಂದು ರಾತ್ರಿ ನನ್ನ ನಿರ್ದೇಶನದ ಮೇರೆಗೆ ವಾಯುವ್ಯ ನೈಜೀರಿಯಾದಲ್ಲಿ ಐಸಿಸ್ ಭಯೋತ್ಪಾದಕರ ವಿರುದ್ಧ ಅಮೆರಿಕ ಪ್ರಬಲ ಮತ್ತು ಮಾರಕ ದಾಳಿಯನ್ನು ಪ್ರಾರಂಭಿಸಿದೆ ಎಂದು ಬರೆದಿದ್ದಾರೆ.

ಐಸಿಸ್‌ ಉಗ್ರರು ಮುಗ್ಧ ಕ್ರೈಸ್ತರನ್ನು ಹಲವು ವರ್ಷಗಳಿಂದ ಮತ್ತು ಶತಮಾನಗಳಿಂದ ಕಾಣದ ಮಟ್ಟದಲ್ಲಿ ಗುರಿಯಾಗಿಸಿಕೊಂಡು ಕ್ರೂರವಾಗಿ ಕೊಲ್ಲುತ್ತಿದ್ದಾರೆ. ಕ್ರೈಸ್ತರ ಹತ್ಯೆಯನ್ನು ನಿಲ್ಲಿಸದಿದ್ದರೆ ಅವರು ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ನಾನು ಈ ಹಿಂದೆ ಎಚ್ಚರಿಕೆ ನೀಡಿದ್ದೆ. ಇಂದು ಬಾಂಬ್‌ ದಾಳಿ ನಡೆಸುವ ಮೂಲಕ ನರಕಯಾತನೆಯ ದರ್ಶನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಯುದ್ಧ ಇಲಾಖೆಯು ಸಮರ್ಥವಾಗಿ ಈ ದಾಳಿ ನಡೆಸಿದೆ. ಈ ರೀತಿಯ ದಾಳಿ ಅಮೆರಿಕದಿಂದ ಮಾತ್ರ ನಡೆಸಲು ಸಾಧ್ಯ. ನನ್ನ

ನಾಯಕತ್ವದಲ್ಲಿ ಅಮೆರಿಕ ಯಾವುದೇ ಕಾರಣಕ್ಕೂ ಇಸ್ಲಾಮಿಕ್ ಭಯೋತ್ಪಾದನೆಗೆ ಅನುಮತಿ ನೀಡುವುದಿಲ್ಲ. ದೇವರು ನಮ್ಮ ಸೈನ್ಯವನ್ನು ಆಶೀರ್ವದಿಸಲಿ ಮತ್ತು ಮೃತರಾದ ಉಗ್ರರು ಸೇರಿದಂತೆ ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು. ಉಗ್ರರು ಕ್ರೈಸ್ತರ ಮೇಲಿನ ಹತ್ಯೆ ಮುಂದುವರಿಸಿದರೆ ಮತ್ತೆ ಪ್ರಭಲ ದಾಳಿ ನಡೆಸಲಾಗುವುದು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ನೈಜೀರಿಯಾವು ಐಸಿಸ್ ಸಂಬಂಧಿತ ಬಣಗಳು ಮತ್ತು ಬೊಕೋ ಹರಾಮ್ ಸೇರಿದಂತೆ ಉಗ್ರಗಾಮಿ ಸಂಘಟನೆಗಳಿಂದ ಭಾರೀ ಹಿಂಸಾಚಾರವನ್ನು ಎದುರಿಸುತ್ತಿದೆ. ಮುಖ್ಯವಾಗಿ ದೇಶದ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಉಗ್ರರ ಹಾವಳಿ ಹೆಚ್ಚಾಗಿದೆ.

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿಯಲ್ಲಿ ಅಮೆರಿಕ ಇತ್ತೀಚೆಗೆ ನೈಜೀರಿಯಾವನ್ನು ನಿರ್ದಿಷ್ಟ ಕಾಳಜಿಯ ದೇಶದ ಪಟ್ಟಿಗೆ ಸೇರಿಸಿದೆ. ಕ್ರೈಸ್ತರ ಮೇಲಿನ ದೌರ್ಜನ್ಯದ ಪ್ರಕರಣ ವರದಿಯಾದ ಬಳಿಕ ನೈಜೀರಿಯಾದ ಮೇಲೆ ಮಿಲಿಟರಿ ದಾಳಿ ನಡೆಸಲು ಪೆಂಟಗನ್‌ಗೆ ನಿರ್ದೇಶನ ನೀಡಿದ್ದೇನೆ ಎಂದು ಟ್ರಂಪ್ ನವೆಂಬರ್‌ನಲ್ಲಿ ತಿಳಿಸಿದ್ದರು.

Leave a Comment