ಯೂನಸ್ ಸರ್ಕಾರಕ್ಕೆ ಮೋದಿ ಶಾಕ್; ಬಾಂಗ್ಲಾದೇಶದ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯ ರದ್ದುಗೊಳಿಸಿದ ಭಾರತ

Coastal Bulletin
ಯೂನಸ್ ಸರ್ಕಾರಕ್ಕೆ ಮೋದಿ ಶಾಕ್; ಬಾಂಗ್ಲಾದೇಶದ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯ ರದ್ದುಗೊಳಿಸಿದ ಭಾರತ

ನವದೆಹಲಿ: ಬಾಂಗ್ಲಾದೇಶದ ಉಚ್ಛಾಟಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದಿಂದ ಪಲಾಯನಗೊಂಡು ದೆಹಲಿಯಲ್ಲಿ ಆಶ್ರಯ ಪಡೆದ ನಂತರ ಬಾಂಗ್ಲಾದೇಶ (Bangladesh) ಮತ್ತು ಭಾರತದ ಸಂಬಂಧ ಮತ್ತಷ್ಟು ಹಳಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆಗಿನಿಂದ ಬಾಂಗ್ಲಾದೇಶ ಭಾರತದ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ಕತ್ತಿ ಮಸೆಯುತ್ತಲೇ ಇದೆ. ಮಾರ್ಚ್ ಅಂತ್ಯದಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ (Muhammad Yunus) ವಿನಾಕಾರಣ ಭಾರತದ ವಿರುದ್ಧ ಹೇಳಿಕೆ ನೀಡಿದ್ದರು. ಭಾರತದ ಈಶಾನ್ಯ ಭಾಗದಲ್ಲಿರುವ 7 ರಾಜ್ಯಗಳು ಬಾಂಗ್ಲಾದೇಶದಿಂದಲೇ ಸುತ್ತುವರೆದಿವೆ. ಆ ಭಾಗದಲ್ಲಿ ಚೀನಾ ತನ್ನ ಪ್ರಭಾವ ವಿಸ್ತರಿಸಬೇಕೆಂಬುದು ನಮ್ಮ ಬಯಕೆ ಎಂದು ಅವರು ಹೇಳಿಕೆ ನೀಡಿ ಚೀನಾದ ಓಲೈಕೆಗೆ ಯತ್ನಿಸಿದ್ದರು. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಭಾರತ ಇದೀಗ ಬಾಂಗ್ಲಾದೇಶಕ್ಕೆ ತಕ್ಕ ಉತ್ತರ ನೀಡಿದೆ. ಬಾಂಗ್ಲಾದೇಶದಿಂದ ರಫ್ತು ಸರಕುಗಳಿಗೆ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯಗಳನ್ನು ಭಾರತ ರದ್ದುಗೊಳಿಸಿದೆ.

ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಭಾರತದ ಈಶಾನ್ಯ ರಾಜ್ಯಗಳಿಗೆ ಚೀನಾದ ಆರ್ಥಿಕ ಪ್ರವೇಶವನ್ನು ಪ್ರತಿಪಾದಿಸಿದ ಕೆಲವು ದಿನಗಳ ನಂತರ, ಭಾರತವು ತನ್ನ ಪ್ರದೇಶದ ಮೂಲಕ ಬಾಂಗ್ಲಾದೇಶದ ರಫ್ತಿಗೆ ಪ್ರಮುಖ ಸಾರಿಗೆ ಸೌಲಭ್ಯವನ್ನು ರದ್ದುಗೊಳಿಸಿದೆ. ಬಾಂಗ್ಲಾದೇಶಕ್ಕೆ ನೀಡಲಾದ ನಿರ್ಣಾಯಕ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯವನ್ನು ಸರ್ಕಾರ

ರದ್ದುಗೊಳಿಸಿದೆ. ಭಾರತ ಬಾಂಗ್ಲಾದೇಶದ ರಫ್ತು ಸರಕುಗಳನ್ನು ಭಾರತೀಯ ಭೂ ಕಸ್ಟಮ್ಸ್ ಸ್ಟೇಷನ್‌ಗಳು (LCS ಗಳು), ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಮೂರನೇ ದೇಶಗಳಿಗೆ ಸಾಗಿಸಲು ಅವಕಾಶ ಮಾಡಿಕೊಟ್ಟಿತ್ತು. ಇದೀಗ ಭಾರತ ಆ ಸೌಲಭ್ಯವನ್ನು ರದ್ದುಪಡಿಸುವ ಮೂಲಕ ಬಾಂಗ್ಲಾದೇಶ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿದೆ.

Leave a Comment