ಮಂಗಳೂರು: ಲೈಂಗಿಕ ದೌರ್ಜನ್ಯ ಎಸಗಿ ಅಪ್ರಾಪ್ತಯ ಕೊಲೆಗೈದ ಪ್ರಕರಣ: ಆರೋಪಿಗೆ ಮರಣ ದಂಡನೆ ಶಿಕ್ಷೆ

Coastal Bulletin
ಮಂಗಳೂರು: ಲೈಂಗಿಕ ದೌರ್ಜನ್ಯ ಎಸಗಿ ಅಪ್ರಾಪ್ತಯ ಕೊಲೆಗೈದ ಪ್ರಕರಣ: ಆರೋಪಿಗೆ ಮರಣ ದಂಡನೆ ಶಿಕ್ಷೆ

ಮಂಗಳೂರು: ಅಪ್ರಾಪ್ತಗೆ ಲೈಂಗಿಕ ದೌರ್ಜನ್ಯ ಎಸಗಿ, ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಫ್‌ಸಿ-2 (ಪೊಕ್ಸ್) ನ್ಯಾಯಾಲಯವು ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳಗಾವಿ ಸವದತ್ತಿ ತಾಲೂಕು ಹಂಚಿನಾಳ ಗ್ರಾಮ ಮಾದರ ನಿವಾಸಿ ಫಕೀರಪ್ಪ ಹಣಮಪ್ಪ ಮಾದರ (58) ಶಿಕ್ಷೆಗೊಳಗಾದ ಆರೋಪಿ.

ಅಪ್ರಾಪ್ತೆಯು ಮೂಲತಃ ಬೆಳಗಾವಿ ಜಿಲ್ಲೆಯ ಚುಂಚನೂರು ಗ್ರಾಮದ ನಿವಾಸಿಯಾಗಿದ್ದು, ಕೊಣಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಬಾಲಕಿಯ ತಾಯಿ ತನ್ನ ಮಗಳನ್ನು ತನ್ನ ಸೋದರ ಸಂಬಂಧಿಯ ಮನೆಯಲ್ಲಿ ಬಿಟ್ಟು ವಸತಿ ಶಾಲೆಗೆ ಕರೆದುಕೊಂಡು ಹೋಗುವಂತೆ ಹೇಳಿ ಊರಿಗೆ ತೆರಳಿದ್ದರು.

2024ರ ಆ.6ರಂದು ಬೆಳಗ್ಗೆ ಬಾಲಕಿಯ ಮಾವ ಗಾರೆ ಕೆಲಸಕ್ಕೆ ಹೊರಟಿದ್ದರೆ, ಅವರ ಹೆಂಡತಿ ಊರಿಗೆ ಹೋಗಿ ದ್ದರು. ಹಾಗಾಗಿ ಆ ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡ ಪಕ್ಕದ ಬಾಡಿಗೆ ಮನೆಯಲ್ಲಿದ್ದ ಆರೋಪಿ ಫಕೀರಪ್ಪ ಹಣಮಪ್ಪ ಮಾದರ ಬಾಲಕಿಯಿದ್ದ ಮನೆಗೆ ಅಕ್ರಮ ಪ್ರವೇಶ ಮಾಡಿ ಲೈಂಗಿಕ ದೌರ್ಜನ್ಯ ಎಸಗಿ ಆಕೆಗೆ ಮುಖಕ್ಕೆ ಕಚ್ಚಿ ಗಾಯಗೊಳಿಸಿದ್ದ ಬಳಿಕ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಫ್‌ಸಿ-2 (ಪೊಕ್ಕೊ) ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್.ಮಾನು ಆರೋಪಿಗೆ ಬಿಎನ್‌ಎಸ್ 103(1) ಕೊಲೆ ಪ್ರಕರಣಕ್ಕೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಪೊಕ್ಸ್‌ 4(2)ರ ಪ್ರಕರಣಕ್ಕೆ ಜೀವಾವಧಿ

ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 4 ತಿಂಗಳು ಸಾದಾ ಶಿಕ್ಷೆ, ಬಿಎನ್ಎಸ್ 332(ಎ) ಅಕ್ರಮ ಪ್ರವೇಶಗೈದ ಅಪರಾಧದಡಿ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 4 ತಿಂಗಳು. ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

5 ಲಕ್ಷ ರೂ. ಪರಿಹಾರ: ದಂಡದ ಮೊತ್ತ 1 ಲಕ್ಷ ರೂವನ್ನು ಬಾಲಕಿಯ ತಂದೆ-ತಾಯಿಗೆ ನೀಡಬೇಕು. ಅಲ್ಲದೆ ತಂದೆ-ತಾಯಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶ ನೀಡಿದೆ.

ಪಣಂಬೂರು ಇನ್‌ಸ್ಪೆಕ್ಟರ್ ಮುಹಮ್ಮದ್ ಸಲೀಂ ಅಬ್ಬಾಸ್ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ಸರಕಾರದ ಪರವಾಗಿ ವಾದಿಸಿದ್ದರು.

ಪ್ರತ್ಯಕ್ಷ ಸಾಕ್ಷಿ : ಅಪ್ರಾಪ್ತಯು ಕೊಲೆಗೆ ಮುನ್ನಾ ದಿನ ನೆರೆಮನೆಯ ಮಹಿಳೆಯೊಬ್ಬರ ಫೋನ್ ಮೂಲಕ ತನ್ನ ತಾಯಿಗೆ ಕರೆ ಮಾಡಿ ಜ್ವರವಿರುವ ಬಗ್ಗೆ ಹೇಳಿದ್ದಳು. ಹಾಗಾಗಿ ಮರುದಿನ ಅದೇ ಮಹಿಳೆಯ ಫೋನ್‌ಗೆ ಕರೆ ಮಾಡಿ ಬಾಲಕಿ ಜತೆ ಮಾತನಾಡಲು ಫೋನ್ ಕೊಡುವಂತೆ ತಾಯಿ ಹೇಳಿದ್ದರು. ಅದರಂತೆ ಫೋನ್ ಕೊಡಲು ಬಾಲಕಿಯಿದ್ದ ಮನೆಯೊಳಗೆ ಮಹಿಳೆಯು ಪಕ್ಕದ ಮನೆಯ ಮತ್ತೊಬ್ಬ ಮಹಿಳೆಯ ಜೊತೆ ಹೋದಾಗ ಆರೋಪಿ ಫಕೀರಪ್ಪ ಅಲ್ಲಿರವುದನ್ನು ಕಂಡಿದ್ದರು.

Leave a Comment