ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಸಹಕಾರ ಪ್ರಕೋಷ್ಟದ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತ್ರತ್ವದಲ್ಲಿ ಒಡ್ಡೂರು ಫಾರ್ಮ್ ನಲ್ಲಿ ಭಾನುವಾರ ಸಹಕಾರಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಜ.14 ರಿಂದ ಎಲ್ಲಾ ಗ್ರಾಮಗಳಿಗೂ ಸಂದರ್ಶಿಸಲಿದ್ದು, ಅಭಿವೃದ್ಧಿಯ ಪ್ರಗತಿನೋಟದೊಂದಿಗೆ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುವುದು, ಜನರೊಂದಿಗೆ ಬೆರೆತು ಕೆಲಸ ಮಾಡುವ ತೃಪ್ತಿ ನನಗಿದೆ ಎಂದರು.
ಕಾರ್ಯಕ್ರಮವನ್ನು ಮಾಜಿ ಶಾಸಕ ಹಾಗೂ ಕಲ್ಲಡ್ಕ ರೈತರ ಸೇವಾ ಸಹಕಾರಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಉದ್ಘಾಟಿಸಿ ಮಾತನಾಡಿ, ಇಂದು ಸಹಕಾರ ಸಂಘಗಳು ಜನರಿಗೆ ನಂಬಿಕೆ ಬರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ವಿಧಾನಸಭಾ ಕ್ಷೇತ್ರದಲ್ಲಿ 67 ಹಾಲು ಉತ್ಪಾದಕರ ಸಂಘಗಳು ಮತ್ತು 20 ವ್ಯ.ಸೇ.ಸಂಘಗಳು ಇವೆ
ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ, ಇಂದು ಪ್ರಧಾನಮಂತ್ರಿಯವರ ನೇತ್ರತ್ವದಲ್ಲಿ ಸರಕಾರ ರೈತರಿಗೆ ಹಾಗೂ ಸಹಕಾರಿಗಳಿಗೆ ಉತ್ತಮ ನೆರವು ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ವಹಿಸಿದ್ದರು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜ, ಕೆಎಂಎಫ್ ನಿರ್ದೇಶಕರಾದ ಸುಧಾಕರ ರೈ, ಸವಿತಾ ಶೆಟ್ಟಿ ಹೀಗೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಂಟ್ವಾಳ ಸಹಕಾರಿ ಪ್ರಕೋಷ್ಠದ ಸಂಚಾಲಕ ಜಯಶಂಕರ ಬಾಸ್ರಿತ್ತಾಯ ಸ್ವಾಗತಿಸಿದರು. ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.














