Coastal Bulletin

ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯವಂತನಾಗಿ ಬದುಕುವ ಹಕ್ಕು ಇದೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗಳಿಸಿದೆ, ಕ್ಷಯ ರೋಗ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ನಿಕ್ಷಯ ಮಿತ್ರ ಯೋಜನೆ ಜಾರಿಗೊಳಿಸಿದಾಗ ದೇಶಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿದೆ, ಈ ಪೈಕಿ ಸೇವಾಂಜಲಿ ಪ್ರತಿಷ್ಠಾನವೂ ಒಂದು ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ ಮಿತ್ರ  ಯೋಜನೆಯಡಿ ಸೇವಾಂಜಲಿ ಪ್ರತಿಷ್ಟಾನ ಫರಂಗಿಪೇಟೆಯ ಆಶ್ರಯದಲ್ಲಿ, ರೋಟರಿ ಕ್ಲಬ್ ಫರಂಗಿಪೇಟೆ ಹಾಗೂ ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು ನಂತೂರು ಇದರ ರಾಷ್ಟ್ರೀಯ ಸೇವಾ ಯೋಜನೆಯ ಸಹಕಾರದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಸೋಮವಾರ ನಡೆದ ಕ್ಷಯ ರೋಗಿಗಳಿಗೆ ಆಹಾರ, ಧವಸ ಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷ್ಣಕುಮಾರ್ ಪೂಂಜ ಅವರ ಸೇವಾ ಕಾರ್ಯದೊಂದಿಗೆ ಕೈ ಜೋಡಿಸುವುದು ನಮ್ಮ ಕರ್ತವ್ಯ. ಆದ್ದರಿಂದ ೩೦ ಮಂದಿ ರೋಗಿಗಳ ಮುಂದಿನ ಆರು ತಿಂಗಳ ವೆಚ್ಚ ಭರಿಸುವುದಾಗಿ ರಾಜೇಶ್ ನಾಕ್ ಘೋಷಿಸಿದರು. ಮಂಗಳೂರು ಶಾಸಕ ಯು.ಟಿ. ಖಾದರ್ ಮಾತನಾಡಿ ಕ್ಷಯ ಮುಕ್ತ ಭಾರತ ನಿರ್ಮಾಣವಾಗಿ ಸ್ವಸ್ಥ ಸಮಾಜದ ನಿರ್ಮಾಣಗೊಳಿಸುವುದು ನಮ್ಮ ಗುರಿ ಅದಕ್ಕಾಗಿ ಬೇರೆ ಬೇರೆ ಯೋಜನೆಗಳು ಜಾರಿಗೆ ಬಂದಿದೆ. ಪಿಡುಗುಗಳು ದೂರವಾಗಬೇಕಾದರೆ  ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ, ಸಂಘ ಸಂಸ್ಥೆಗಳು ಹಾಗೂ ಜನ ಸಾಮಾನ್ಯರ ಸಹಕಾರವೂ ಬೇಕು, ಪೋಲಿಯೋ ಮುಕ್ತ ಭಾರತ ನಿರ್ಮಾಣವಾದಂತೆ  ಕ್ಷಯ ಮುಕ್ತ ಭಾರತ ನಿರ್ಮಾಣ ಸಾಧ್ಯವಿದೆ ಅದನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ ಎಂದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನದಲ್ಲಿ ಕಳೆದ ಅಕ್ಟೋಬರ್ ತಿಂಗಳಿನಿಂದ 

ನಿಕ್ಷಯ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ಹಾಗೂ ಧವಸ ಧಾನ್ಯ ವಿತರಣೆ ಮಾಡುವ ಕಾರ್ಯಕ್ರಮ ಹಮಿಕೊಳ್ಳಲಾಯಿತು, ಪ್ರಸ್ತುತ ೩೦ ಮಂದಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಇದರ ಜೊತೆಗೆ ೭ ಮಂದಿ ಕ್ಯಾನ್ಸರ್ ರೋಗಿಗಳನ್ನು ದತ್ತು ಪಡೆದು ಅಂದಾಜು ೩.೫ ಲಕ್ಷ ರೂಪಾಯಿ ಅಂದಾಜು ವೆಚ್ಚದ ಕಾರ್ಯಕ್ರಮವನ್ನು ದಾನಿಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯ  ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಕ್ಷಯ ನಿಯಂತ್ರಣ ಕ್ರಮದ ಬಗ್ಗೆ  ಮಾಹಿತಿ ನೀಡಿದರು. ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಪುದು ಗ್ರಾ. ಪಂ.  ಅಧ್ಯಕ್ಷ  ರಮ್ಲಾನ್ ಮಾರಿಪಳ್ಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಡಾ. ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು ನಂತೂರು ಇಲ್ಲಿನ  ಪ್ರಾಧ್ಯಾಪಕಿ ಸಂಧ್ಯಾ, ರೋಟರಿ ಕ್ಲಬ್ ಫರಂಗಿಪೇಟೆ ಅಧ್ಯಕ್ಷ ಜಯರಾಂ ಶೇಖ, ಉದ್ಯಮಿ ಉಮೇಶ್ ಬೆಂಜನಪದವು, ಎಂ.ಆರ್. ನಾಯರ್,  ರಮೇಶ್ ತುಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮುಖರಾದ ತೇವು ತಾರನಾಥ ಕೊಟ್ಟಾರಿ, ಕೊಡ್ಮಾಣ್ ದೇವದಾಸ್ ಶೆಟ್ಟಿ, ಪ್ರಕಾಶ್ ಕಿದೆಬೆಟ್ಟು, ಸುಕುಮಾರ್ ಅರ್ಕುಳ, ವಿಶ್ವನಾಥ ಚಾಪೆ, ವೃಂದಾ ಪೂಜಾರಿ, ಮನೋಹರ ನಾಯ್ಕ, ಶೇಖರ್ ಕಲ್ಲತಡಮೆ, ಯೋಗೀಶ್ ಸುಜೀರ್, ಪ್ರಶಾಂತ್ ತುಂಬೆ ಹಾಜರಿದ್ದರು.

Leave a Comment