ಬಂಟ್ವಾಳ: ಅ 02ರಂದು ಜಮೀಯ್ಯತುಲ್ ಫಲಾಹ್ ತಾಲೂಕು ಘಟಕದಿಂದ ವಿದ್ಯಾರ್ಥಿ ವೇತನ ವಿತರಣೆ,ರಸ ಪ್ರಶ್ನೆ ಸನ್ಮಾನ,ತರಬೇತಿ ಕಾರ್ಯಾಗಾರ‌.

Coastal Bulletin
ಬಂಟ್ವಾಳ: ಅ 02ರಂದು ಜಮೀಯ್ಯತುಲ್ ಫಲಾಹ್ ತಾಲೂಕು ಘಟಕದಿಂದ ವಿದ್ಯಾರ್ಥಿ ವೇತನ ವಿತರಣೆ,ರಸ ಪ್ರಶ್ನೆ ಸನ್ಮಾನ,ತರಬೇತಿ ಕಾರ್ಯಾಗಾರ‌.

ಬಂಟ್ವಾಳ:ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದಿಂದ ಸುಮಾರು 50 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಗಾಂಧೀ ಜಯಂತಿ ಪ್ರಯುಕ್ತ ಆಹ್ವಾನಿತ ವಿದ್ಯಾರ್ಥಿಗಳಿಗೆ ಗಾಂಧೀಜಿ ಬದುಕು ಆಧರಿಸಿದ ರಸ ಪ್ರಶ್ನೆ ಕಾರ್ಯಕ್ರಮ, ತರಬೇತಿ ಕಾರ್ಯಾಗಾರ‌, ಕೈಯಲ್ಲಿ ಪೂರ್ತಿ ಕುರ್ ಆನ್ ಬರೆದು ಸಾಧನೆ ಮಾಡಿರುವ ವಿದ್ಯಾರ್ಥಿನಿಯರಾದ ಸಜ್ಲ ಇಸ್ಮಾಯಿಲ್ ಹಾಗೂ ಫಾತಿಮತ್ ಅಬೀರ ಇವರಿಗೆ ಸನ್ಮಾನ ಕಾರ್ಯಕ್ರಮ ಅ.02ರಂದು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಅದ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಹೇಳಿದರು.

ಅವರು ಸೆ 30ರಂದು ಸಂಜೆ ಮೆಲ್ಕಾರಿನ ಕಛೇರಿಯಲ್ಲಿ ಕರೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ತನ್ನ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯ ನೂತನ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ವಿದ್ಯಾರ್ಥಿ ವೇತನ ವಿತರಿಸುವರು. ಅತಿಥಿಗಳಾಗಿ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ, ಸಂಸ್ಥೆಯ ಅಜೀವ ಸದಸ್ಯರಾದ ಆರಿಫ್ ಕೆ., ಬಿ.ಕೆ.ಅಬ್ದುಲ್ಲಾ ಕುಂಞಿ ಹಾಜಿ ಬೈರಿಕಟ್ಟೆ, ಝುಬೈರ್ ಬುಳೇರಿಕಟ್ಟೆ, ಮಂಗಳೂರು ಎ.ಜೆ.ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯರಾದ ಡಾ. ಹಸೀನಾ ಭಾಗವಹಿಸುವರು. ಉಪನ್ಯಾಸಕ ಹಾಗೂ ರಾಜ್ಯ ಮಟ್ಟದ ತರಬೇತುದಾರ ಅಬ್ದುಲ್ ರಝಾಕ್ ಅನಂತಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು ಎಂದರು.

ಸುದ್ದಿಗೊಷ್ಟಿಯಲ್ಲಿ ಕಾರ್ಯದರ್ಶಿ ಹಕೀಂ ಕಲಾಯಿ, ಕೋಶಾಧಿಕಾರಿ ಲತೀಫ್ ನೇರಳಕಟ್ಟೆ,ಪೂರ್ವಾದ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಉಪಸ್ಥಿತರಿದ್ದರು.

ಘಟಕದ ಹಿನ್ನೆಲೆ ಹಾಗೂ ಸಾಮಾಜಿಕ ಕಾರ್ಯಗಳು:

ಬಂಟ್ವಾಳ ತಾಲೂಕು ಘಟಕವು ಕೂಡಾ 1988 ರಲ್ಲಿ ಸ್ಥಾಪನೆಯಾಗಿದ್ದು ನಿರಂತರ ಶೈಕ್ಷಣಿಕ , ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಕ್ರಿಯಾಶೀಲ ಘಟಕವಾಗಿ ಹೊರಹೊಮ್ಮಿದೆ. ಈ ಸಾಲಿನಲ್ಲಿ ಸ್ವಂತ ಸುಸಜ್ಜಿತ ಕಛೇರಿಯನ್ನು

ಹೊಂದಿರುವ ಬಂಟ್ವಾಳ ಘಟಕವು 1988 ರಿಂದಲೂ ನಿರಂತರವಾಗಿ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ 

1988 ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಕೇಂದ್ರೀಕರಿಸಿ ಮಂಗಳೂರಿನಲ್ಲಿ ಸ್ಥಾಪನೆಯಾದ ಜಿಲ್ಲೆಯ ಸಮಾಜ‌ ಸೇವಾ ಸಂಸ್ಥೆ ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲೆ. ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪ್ರತಿವರ್ಷ ಶೈಕ್ಷಣಿಕ ಪ್ರೇರಣೆ ನೀಡುತ್ತಾ ಬಂದಿದೆ. ಹೆಣ್ಣು ಮಕ್ಕಳ ಶಿಕ್ಷಣ ಜಾಗೃತಿ, ಶಾಲೆ ಬಿಟ್ಟ ಮಕ್ಕಳಿಗೆ ಮರಳಿ ಬಾ ಶಾಲೆಗೆ ಕಾರ್ಯಕ್ರಮ , ಸರ್ವ‌ ಶಿಕ್ಷಣ ಅಭಿಯಾನದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕಾರ, ವರದಕ್ಷಿಣೆ ವಿರುದ್ಧ ಜಾಗೃತಿ ಇವು ಈ ಸಂಸ್ಥೆಯ ಪ್ರಮುಖ ಕಾರ್ಯಕ್ರಮಗಳು.

ಮಂಗಳೂರು ಕಂಕನಾಡಿ ಯಲ್ಲಿ ಸಂಸ್ಥೆಯ ಸುಸಜ್ಜಿತ ಕಛೇರಿ, ಸಮುದಾಯ ಭವನ , ವಿದ್ಯಾರ್ಥಿ ನಿಲಯ ಕಾರ್ಯಾಚರಿಸುತ್ತಿದೆ. ಉಳ್ಳಾಲ ತಾಲೂಕಿನ ಅಡ್ಕರೆಪಡ್ಪು ಎಂಬಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜನ್ನು  ಸ್ಥಾಪಿಸಿ ನಡೆಸುತ್ತಾ ಬರುತ್ತಿದೆ.

Leave a Comment