ಬಂಟ್ವಾಳ: ಕಾರೊಂದು ನಿಯಂತ್ರಣ ಕಳೆದುಕೊಂಡು ಮೆಲ್ಕಾರ್ ಮೇಲ್ಸೇತುವೆಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅ 28ರಂದು ಮಂಗಳವಾರ ನಡೆದಿದೆ.
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಕಡಬ ತಾಲೂಕಿನ ಸವಣೂರು ನಿವಾಸಿ ಕಾರ್ತಿಕ್ (23) ಮೃತಪಟ್ಟ ಯುವಕನಾಗಿದ್ದು, ಈತನ ಸ್ನೇಹಿತರಾದ ಸವಣೂರು ನಿವಾಸಿಗಳಾದ ಹರ್ಷಿತ್, ದೀಕ್ಷಿತ್, ಜಗದೀಶ್ ಮತ್ತು ನಿತಿನ್ ಎಂಬವರು ಗಾಯಗೊಂಡವರು.
ಕಾರ್ತಿಕ್ ಹಾಗೂ ಈತನ ನಾಲ್ಕು ಮಂದಿ ಸ್ನೇಹಿತರು ಅ.28 ರಂದು ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಕಂಪೆನಿಯೊಂದರ ಉದ್ಯೋಗದ ನಿಮಿತ್ತ ಸಂದರ್ಶನಕ್ಕೆ ಆಗಮಿಸಿ ಸಂಜೆ ಊರಿಗೆ
ತೆರಳುತ್ತಿದ್ದ ವೇಳೆ ಮೆಲ್ಕಾರ್ ನ ಮೇಲ್ಸೇತುವೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಚಾಲಕ ಸಹಿತ ಐದು ಮಂದಿಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡು ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ತಿಕ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಪೋಲೀಸರು ತಿಳಿಸಿದ್ದಾರೆ.












