ಬಂಟ್ವಾಳ :ವಿಶ್ವ ಹೃದಯ ದಿನದ ಅಂಗವಾಗಿ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ತುಂಬೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಕಚೇರಿಯ ಸಿಬ್ಬಂದಿಗಾಗಿ ಸಿಪಿಆರ್ (ಹೃದಯ-ಶ್ವಾಸಕೋಶ ಪುನಶ್ಚೇತನ) ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ ಸೆ. 29ರಂದು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಹೃದಯಾಘಾತ ಸೇರಿದಂತೆ ತುರ್ತು ಆರೋಗ್ಯ ಪರಿಸ್ಥಿತಿಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಸಿಪಿಆರ್ ನೀಡುವ ವಿಧಾನ ಹಾಗೂ ಪ್ರಥಮ ಚಿಕಿತ್ಸೆ ನೀಡುವ ಕುರಿತು ಸಿಬ್ಬಂದಿಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಲಾಯಿತು. ಸಿಬ್ಬಂದಿಗೆ ಪ್ರಾಯೋಗಿಕ ಅಭ್ಯಾಸಕ್ಕೂ ಅವಕಾಶ ಕಲ್ಪಿಸಲಾಯಿತು.
ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆಯ ಮೂಳೆಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಉಜ್ವಲ್ ಸುವರ್ಣ ಅವರು ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಿದರು. ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ತುಂಬೆಯ ಪ್ರಾಂಶುಪಾಲರಾದ ಡಾ. ರೀನಾ ವಿಲ್ಮಾ ಫ್ರಾಂಕ್ ಅವರು ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ತುರ್ತು ಚಿಕಿತ್ಸೆಯ ಮೂಲಕ ವ್ಯಕ್ತಿಯ ಜೀವವನ್ನು ಹೇಗೆ ರಕ್ಷಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.
ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆಯ ನರ್ಸಿಂಗ್ ಅಧೀಕ್ಷಕರಾದ ಶ್ರೀಮತಿ ಸಿಲ್ವಿಯಾ ನಿಶಾ ಲೋಬೋ, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರಾದ
ಶ್ರೀಮತಿ ಜಾನೆಟ್ ಸಿಕ್ವೇರಾ, ಉಪನ್ಯಾಸಕರಾದ ಶ್ರೀಮತಿ ಸುಷ್ಮಾ, ಸೌಲಭ್ಯ ಸಂಯೋಜಕರಾದ ಶ್ರೀ ಜೇಸನ್ ಕರ್ಕಡ ಹಾಗೂ ಶ್ರೀಮತಿ ತ್ರಿವೇಣಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆ ಮತ್ತು ನಿರ್ವಹಣೆಗೆ ಸಹಕರಿಸಿದರು.
ತುರ್ತು ಸಂದರ್ಭಗಳಲ್ಲಿ ಸಮಯೋಚಿತವಾಗಿ ಸೂಕ್ತ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ನೀಡುವ ಮೂಲಕ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಗೆ ಇಂತಹ ತರಬೇತಿ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರೂ ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆಯ ಕುರಿತು ಮೂಲಭೂತ ತರಬೇತಿ ಹೊಂದಿರುವುದು ಅಗತ್ಯವಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದಿಸಿ, ಜೀವ ಉಳಿಸಲು ಅಗತ್ಯವಾದ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಈ ತರಬೇತಿ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯಿತಿ, ಬಂಟ್ವಾಳದ ಸಹಾಯಕ ನಿರ್ದೇಶಕರಾದ ಶ್ರೀ ವಿಶ್ವನಾಥ್ ಅವರು ತಿಳಿಸಿದರು.
ಸಿಬ್ಬಂದಿಯ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆಯ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.











