ಬಂಟ್ವಾಳ: ಓಂ ಶ್ರೀ ಗೆಳೆಯರ ಬಳಗ ( ರಿ.) ನಾಯಿಲ ಇದರ 19 ನೇ ವಾರ್ಷಿಕೋತ್ಸವ ಓಂ ಶ್ರೀ ಪರ್ಬ ಕಾರ್ಯಕ್ರಮ ಮಾ.29 ರಂದು ಶನಿವಾರ ಸಂಘದ ಕಟ್ಟಡದ ವಠಾರದಲ್ಲಿ ನಡೆಯಲಿದೆ ಎಂದು ಓಂ.ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಅಟ್ಲೂರು ಬಿ ಸಿ ರೋಡ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವಕಲ್ಯಾಣದ ಸತ್ ಚಿಂತನೆಗಾಗಿ ಶ್ರೀ ಸತ್ಯನಾರಾಯಣ ಪೂಜೆ,ಧಾರ್ಮಿಕ ಪರಂಪರೆಯ ಭಕ್ತಿ ಚಿಂತನೆಗಾಗಿ ಕುಣಿತ ಭಜನಾ ಸ್ಪರ್ಧೆ ಹಾಗೂ ಭಕ್ತಿ ಪ್ರಧಾನವಾಗಿರುವ ದೈವರಾಜೆ ಶ್ರೀ ಬಬ್ಬು ಸ್ವಾಮಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಈ ವರ್ಷದಿಂದ ಗ್ರಾಮದ ಜನರಿಗೆ ಸಹಾಯವಾಗುವ ರೀತಿಯಲ್ಲಿ ಆರೋಗ್ಯ ನಿಧಿ ಹಾಗೂ ವಿದ್ಯಾರ್ಥಿನಿ ನಿಧಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಬೆಳಿಗ್ಗೆ 9 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ 3 ಗಂಟೆಗೆ ಕುಣಿತ ಭಹನಾ
ಸ್ಪರ್ಧೆ ,ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಅನೇಕ ಗಣ್ಯರು ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸ್ಥಳೀಯ ಸಾಧಕ ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಪ್ರಧಾನ ಸಾಧಕರಿಗೆ ಸನ್ಮಾನ ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ರಾಜೇಶ್ ಮರ್ದೊಳಿ, ನಾಗೇಶ್ ಕುಲಾಲ್, ಕಮಲಾಕ್ಷ ಕೊಟ್ಟಾರಿ ಮತ್ತು ಓಂ.ಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ನಳಿನಿ ಶುಭಕರ ಉಪಸ್ಥಿತರಿದ್ದರು.















