Coastal Bulletin

ಬಂಟ್ವಾಳ: ಪುದು ಗ್ರಾಮದ ಗೋವಿನತೋಟ ರಾಧಾ ಸುರಭಿ ಗೋ ಮಂದಿರದ ವತಿಯಿಂದ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಮತ್ತು ಗೋ ಸೇವಾ ಗತಿವಿದಿ ಕರ್ನಾಟಕದ ಸಹಯೋಗದಲ್ಲಿ ವಿಶ್ವಗುರು ಭಾರತಕ್ಕಾಗಿ ನವೆಂಬರ್ ೧೪ರಿಂದ ೨೨ರ ವರೆಗೆ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿ ನಡೆಸಲು ಉದ್ದೇಶಿಸಿರುವ ಧರ್ಮಾಧಾರಿತ ಅಷ್ಟೋತ್ತರ ಶತ ಭಾಗವತ ಕಥಾ ಪಾರಾಯಣ ಮಹಾಯಜ್ಞ ಹಾಗೂ ಗೋ ನವರಾತ್ರಿ ಉತ್ಸವದ ಸಮಾಲೋಚನಾ ಸಭೆ ಗೋ ಮಂದಿರದಲ್ಲಿ ಜೂ 25ರಂದು ನಡೆಯಿತು.

ಗೋ ಮಂದಿರದ ಅಧ್ಯಕ್ಷ ಭಕ್ತಿಭೂಷಣ್‌ದಾಸ್ ಪ್ರಭುಜೀ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಧರ್ಮದ ಆಚರಣೆ ಮಾಡದೆ ದೋಷಗಳು ಬರುತ್ತಿದ್ದು, ಧರ್ಮದ ರಕ್ಷಣೆಗೆ ಧರ್ಮಾಧಾರಿತ ಕಾರ್ಯಕ್ರಮಗಳು ಅಗತ್ಯವಾಗಿದೆ. ಧರ್ಮದ ಅವನತಿಯನ್ನು ತಪ್ಪಿಸಲು ನಾವೆಲ್ಲರೂ ಒಟ್ಟು ಸೇರಬೇಕಿದ್ದು, ಸೂರ್ಯೋದಯದ ಮೊದಲೇ ಏಳುವ ಅಭ್ಯಾಸವನ್ನು ಬೆಳೆಸಿಕೊಂಡು ಮನೆ ಬೆಳಗುವ ಕಾರ್ಯವೂ ಆಗಬೇಕು. ಧರ್ಮದ ಕಾರ್ಯಕ್ಕೆ ಸಮಯ ಕೊಟ್ಟಾಗ ವಿಶ್ವಗುರು ಭಾರತದ ಕನಸು ಶೀಘ್ರ ನೆರವೇರುತ್ತದೆ.

ಗೋ ಆಧಾರಿತ ಕೃಷಿ, ಗುರುಕುಲ ಆಧಾರಿತ ಶಿಕ್ಷಣಕ್ಕೆ ಮೆಕಾಲೆ ಶಿಕ್ಷಣ ದೊಡ್ಡ ಹೊಡೆತ ನೀಡಿದ್ದು, ಅದರ ಕುರಿತು ಜಾಗೃತರಾಗಿ ಧರ್ಮದ ರಕ್ಷಣೆಗೆ ಧರ್ಮಾಧಾರಿತ ಕಾರ್ಯಕ್ರಮಗಳು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾಗವತ ಪಾರಾಯಣದಂತಹ ಧರ್ಮಕಾರ್ಯಗಳು ಅಗತ್ಯವಾಗಿದೆ ಎಂದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹ

ಕಾರ್ಯವಾಹ ಸುಭಾಶ್ಚಂದ್ರ ಕಳಂಜ, ಉಡುಪಿ ಪುಣ್ಯಕೋಟಿ ಗೋಶಾಲೆಯ ಸಂಚಾಲಕ ವಿಜಯಪ್ರಕಾಶ್ ಮಲ್ಪೆ, ಸಂಸ್ಕೃತ ಪ್ರಾಧ್ಯಾಪಕ ರಾಮಕೃಷ್ಣ ಮಂಗಳೂರು, ಮಂಚಿ ಕನಕಗಿರಿ ಗೋಶಾಲೆಯ ಅಧ್ಯಕ್ಷ ಕೈಯೂರು ನಾರಾಯಣ ಭಟ್, ವಿಹಿಂಪ ಬಂಟ್ವಾಳ ತಾಲೂಕು ಅಧ್ಯಕ್ಷ ನ್ಯಾಯವಾದಿ ಪ್ರಸಾದ್‌ಕುಮಾರ್ ರೈ ಉಪಸ್ಥಿತರಿದ್ದರು.

ಶತ ಭಾಗವತ ಕಥಾ ಪಾರಾಯಣ ಮಹಾಯಜ್ಞ ಹಾಗೂ ಗೋ ನವರಾತ್ರಿ ಉತ್ಸವದ ಸಮಿತಿಯನ್ನು ರಚಿಸಲಾಗಿದ್ದು,ಅಧ್ಯಕ್ಷರಾಗಿ ಕ್ಯಾ| ಬ್ರಿಜೇಶ್ ಚೌಟ, ಕಾರ್ಯಾಧ್ಯಕ್ಷರಾಗಿ ಟಿ.ತಾರಾನಾಥ ಕೊಟ್ಟಾರಿ ಮತ್ತು ವಿಜಯಪ್ರಕಾಶ್ ಮಲ್ಪೆ,ಪ್ರದಾನ ಕಾರ್ಯದರ್ಶಿಯಾಗಿ ದಾಮೋದರ ನೆತ್ತರಕೆರೆ, ಕೋಶಾದಿಕಾರಿಯಾಗಿ ಪುಂಚಮೆ ಪದ್ಮನಾಭ ಶೆಟ್ಟಿ ಹಾಗೂ ವಸಂತಿ ಎಲ್. ಶೆಟ್ಟಿ ಆಯ್ಕೆಗೊಂಡರು.

ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು. ಕಳ್ಳಿಗೆ ಗ್ರಾ.ಪಂ.ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರ್ವಹಿಸಿದರು

Leave a Comment