ಬಂಟ್ವಾಳ: ಬಂಟ್ವಾಳದ ಪಚ್ಚಿನಡ್ಕ ಶುಭ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿ| ಕೆ. ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರ ಪ್ರಥಮ ಪುಣ್ಯಸ್ಮರಣೆಯ ಕಾರ್ಯಕ್ರಮವು ಕಳ್ಳಿಗೆಯ ಪಚ್ಚಿನಡ್ಕದ ಶುಭ ನಿಲಯದಲ್ಲಿ ಜ.27 ರಂದು ಶನಿವಾರ ನಡೆಯಿತು.
ಸಮಾರಂಭದಲ್ಲಿ ಸೇವಾ ಕಾರ್ಯವಾಗಿ ದಿ| ಕೆ.ಸೇಸಪ್ಪ ಕೋಟ್ಯಾನ್ ಸ್ಮರಣಾರ್ಥ ಆ್ಯಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಸಲಾಯಿತು.
ಈ ಸಂದರ್ಭದಲ್ಲಿ ಪೊಳಲಿ ಬಡಗಬೆಳ್ಳೂರಿನ ದೀನಬಂಧು ಸಮಾಜ ಸೇವಾ ಸಂಸ್ಥೆ ಹಾಗೂ ವಿಶ್ವ ಬಿಲ್ಲವರ ಸೇವಾ ಚಾವಡಿ ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್‌ನ ಸೇವಾ ಕಾರ್ಯಕ್ಕೆ ಸೇವಾ ನಿಧಿಯನ್ನು ಅರ್ಪಿಸಲಾಯಿತು ಹಾಗೂ ಬಿ.ಸಿ.ರೋಡಿನ ಕೈಕಂಬದಲ್ಲಿ ನೂತನ ಆಟೋ ರಿಕ್ಷಾ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಯಿತು. ಶುಭ ನಿಲಯದ ಆವರಣದಲ್ಲಿ ದಿ. ಸೇಸಪ್ಪ ಕೋಟ್ಯಾನ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ಮಾತನಾಡಿ,
ಸದಾ ಸಮಾಜ ಸೇವೆಯ ಮೂಲಕ ಬದುಕನ್ನು ಸಾಗಿಸಿದ ಸೇಸಪ್ಪ ಕೋಟ್ಯಾನ್ ಅವರ ಇಡೀ ಜೀವನವೇ ಸಮಾಜಕ್ಕೆ ಮಾರ್ಗದರ್ಶಕವಾಗಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಸೇಸಪ್ಪ ಕೋಟ್ಯಾನ್ ಅವರ ಪುತ್ಥಳಿಯ ಮೂಲಕ ನಾವು ಅವರನ್ನು ಸ್ಮರಣೆ ಮಾಡುವ ಜತೆಗೆ ಅವರನ್ನು ಅನುಕರಣೆ ಮಾಡುವುದಕ್ಕೂ ಪ್ರೇರಣೆ ಸಿಗಲಿದೆ ಎಂದರು.
ಪ್ರಮುಖರಾದ ಶೆಟ್ಟಿ ಬೆಂಜನಪದವು, ಸದಾನಂದ ಡಿ.ಶೆಟ್ಟಿ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಅವರ ಕುಟುಂಬದ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು. ಭುವನೇಶ್ ಪಚ್ಚಿನಡ್ಕ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.














