ಬಂಟ್ವಾಳ : ಶಾಲೆಯಲ್ಲಿ ಗುರುವಿನ ಮಾರ್ಗದರ್ಶನ ಪಡೆದು ಪೋಷಕರ ಸಕರಾತ್ಮಕ ಬೆಂಬಲದೊಂದಿಗೆ ಬೆಳೆಯುವ ಮಕ್ಕಳು ಸಮಾಜದ ಅಭ್ಯುದಯಕ್ಕೆ ಕಾರಣವಾಗುತ್ತಾರೆ. ಈ ನಿಟ್ಟಿನಲ್ಲಿ ಸಂಸ್ಕಾರಭರಿತ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ ಎಂದು ಬಿ.ಸಿ.ರೋಡ್ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ತುಕಾರಾಮ ಪೂಜಾರಿಯವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ದ.ಕ.ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿಯವರು ಸರಕಾರಿ ಶಾಲೆಗಳು ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲೆ,ಸಂಸ್ಕೃತಿಯನ್ನು ಪರಿಚಯಿಸುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವಿಶೇಷವಾಗಿ ಈ ಸರಕಾರಿ ಶಾಲೆಯಲ್ಲಿ ಬಹಳ ಮುತುವರ್ಜಿಯಿಂದ ಕೆಲಸ ಮಾಡುವ ಶಾಲಾ ಶಿಕ್ಷಕ ವೃಂದದವರನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರು ಶಾಲು ಸ್ಮರಣಿಕೆ ನೀಡಿ ವಿಶೇಷವಾಗಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಶಾಲಾಭಿವೃದ್ದಿಗೆ ನೆರವು ನೀಡಿದ ಪ್ಲಾಂಟ್ ಟೆಕ್ ಸರ್ವಿಸಸ್ ನ ಶಿವಪ್ರಸಾದ ಕೊಟ್ಟಾರಿಯವರನ್ನು ಗೌರವಿಸಲಾಯಿತು.
ಯುವ ಸಂಗಮದ ಕಾರ್ಯದರ್ಶಿ ಕೇಶವ ನಾಯ್ಕ್, ಉದ್ಯಮಿ ಪದ್ಮನಾಭ ಮಯ್ಯ ಉಪಸ್ಥಿತರಿದ್ದರು.
ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಂಗವಾಗಿ ಪಥಸಂಚಲನ
ಗೌರವ ಸ್ವೀಕರಿಸಿ, ಧ್ವಜಾರೋಹಣವನ್ನು ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ ನೆರವೇರಿಸಿ ಶುಭಹಾರೈಸಿದರು. ಅತಿಥಿಗಳಾದ ಪಂಚಾಯತ್ ಸದಸ್ಯರಾದ ಹೇಮಲತಾ, ಸವಿತಾ, ದೇರಳಕಟ್ಟೆ ಕ್ಷೇಮದ ವೈದ್ಯರಾದ ಸಂದೀಪ್ ರೈ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಜೋಯೇಲ್ ಲೋಬೋ, ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷರಾದ JFD ಗಾಯತ್ರಿಲೋಕೇಶ್, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಶೇಡಿಗುರಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಸುಧೀರ್ ನಿರ್ಮಾಲ್, ದುರ್ಗಾಪರಮೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಚಂದ್ರಾವತಿ ಮೊದಲಾದವರ ಉಪಸ್ಥಿತಿಯಲ್ಲಿ ನಡೆಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ, ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ವಂದಿಸಿದರು. ಶಿಕ್ಷಕರಾದ ಹರಿಪ್ರಸಾದ್ ಕುಲಾಲ್ ಮತ್ತು ದೇವದಾಸ್ ಅರ್ಕುಳ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಪ್ರಕಾಶ್, ಪ್ರಿಯಾ, ಹರೀಶ್ ಡಿ. ಪ್ರತಿಭಾ ಪುರಸ್ಕಾರ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ರಮಾನಾಥ ರೈ ಭೇಟಿ ನೀಡಿ ಶುಭ ಹಾರೈಸಿದರು.
















