ಬಂಟ್ವಾಳ: ಫರಂಗಿಪೇಟೆ ವಿಜಯನಗರ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ೧೦.೦೫ರ ಮೀನ ಲಗ್ನ ಸುಮೂಹೂರ್ತದಲ್ಲಿ ಶ್ರೀ ಆಂಜನೇಯ ದೇವರು ಹಾಗೂ ಶ್ರೀ ಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕವು ವೇ|ಮೂ| ಕೆ.ಮುರಳಿ ಭಟ್ ಕಲ್ಲತಡಮೆ ಅವರ ಪೌರೋಹಿತ್ಯದಲ್ಲಿ ನೆರವೇರಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಬೆಂಗಳೂರು ಬ್ರಹ್ಮಶ್ರೀ ಆನಂದ ಸಿದ್ಧಿ ಪೀಠಂದ ಸಂಸ್ಥಾಪಕ ಮಹರ್ಷಿ ಡಾ| ಆನಂದ ಗುರೂಜಿ ಆಶೀರ್ವಚನ ನೀಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಸಾನಿಧ್ಯ, ಈ ಭಾಗದಲ್ಲಿ ಹನುಮಂತನ ಸಾನಿಧ್ಯ ಪವಿತ್ರವೆನಿಸಿಕೊಂಡಿದ್ದು, ರಾಮರಾಜ್ಯದ ಕನಸಿನ ನನಸಿಗೆ ಪೂರಕವಾಗಿದೆ. ಪವಿತ್ರವಾದ ಗೋ ಸಂಪತ್ತಿನ ಸಂರಕ್ಷಣೆಯೂ ಮುಖ್ಯವಾಗಿದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಪ್ರಧಾನ ಭಾಷಣ ಮಾಡಿ, ಹನುಮಂತ ನಿಗೆ ವ್ಯಾಯಾಮವೇ ಹನುಮಂತ ಪೂಜೆಯಾಗಿದ್ದು, ಧರ್ಮದ ರಕ್ಷಣೆಯಲ್ಲಿ ಹಿಂದೂ ಸಮಾಜಕ್ಕೆ ವ್ಯಾಯಾಮ ಅಗತ್ಯವಾಗಿದೆ. ಇತ್ತೀಚೆಗೆ ನಾನು ಮಾಡಿದ ಭಾಷಣವನ್ನು ತಿರುಚಿ ಆರೋಪ ಹೊರಿಸಲಾಗುತ್ತಿದ್ದು, ನಾನು ಹಿಂದೂಗಳ ಜತೆಗೆ ಮುಸ್ಲಿಂ ಹೆಣ್ಣು ಮಕ್ಕಳ ಕುರಿತು ಕೂಡ ಗೌರವ ಇಟ್ಟುಕೊಂಡವನು. ಅದಕ್ಕೆ ಸಾಕಷ್ಟು ಉದಾಹರಣೆಗಳು ನನ್ನ ಬಳಿ ಇದೆ. ತಾಂಟ್ರೆ ಎಂದು ಹೇಳುವವರಿಗೆ ಹನುಮಂತ ಎದ್ದು ನಿಲ್ಲಬೇಕು ಎಂದರು.
ಆನಂದ ಗುರೂಜಿ ಪುತ್ರ ಶ್ರೀನಿವಾಸ ಶರ್ಮ ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿಯ
ಗೌರವಾಧ್ಯಕ್ಷ ವಜ್ರನಾಭ ಶೆಟ್ಟಿ ಅರ್ಕುಳಬೀಡು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಬಂಟ್ವಾಳ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರಘು ಸಪಲ್ಯ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಪ್ರಧಾನ ಸಂಚಾಲಕ ದೇವಸ್ಯ ಪ್ರಕಾಶ್ಚಂದ್ರ ರೈ, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಕೊಡ್ಮಾಣ್, ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು ವೇದಿಕೆಯಲ್ಲಿದ್ದರು.
ನಿರ್ಮಾಣ ಸಮಿತಿಯ ಅಧ್ಯಕ್ಷ ಅಜಿತ್ ಚೌಟ ದೇವಸ್ಯ, ಪ್ರಧಾನ ಸಂಚಾಲಕ ವಿಠಲ ಆಳ್ವ ಗರೋಡಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಆಡಳಿತ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಗಾಂಬೀರ ಹಾಗೂ ಶಿಕ್ಷಕ ಪ್ರಭಾಕರ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ಸಮ್ಮಾನಿತರ ವಿವರ ನೀಡಿದರು. ಕಾರ್ಯಾಧ್ಯಕ್ಷ ಸದಾನಂದ ಆಳ್ವ ಕಂಪ ಸ್ವಾಗತಿಸಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಕರುಣಾಕರ ಕೊಟ್ಟಾರಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.














