ಮೂಡುಬಿದಿರೆ: ಹೆತ್ತವರು ಮಕ್ಕಳ ಸುಂದರ ಜೀವನಕ್ಕಾಗಿ ಸ್ವಾರ್ಥ ಬಿಟ್ಟು ಸರ್ವಸ್ವವನ್ನೂ ತ್ಯಾಗಮಾಡಿ ಗಂಧದ ಹಾಗೆ ತಮ್ಮ ಬದುಕನ್ನು ತೇಯ್ದಿರುತ್ತಾರೆ. ಹೀಗೆ ಬೆಳೆದು ದೊಡ್ಡವರಾದ ಮಕ್ಕಳು ಹೆತ್ತವರ ಇಷ್ಟದ ಜೀವನಕ್ಕೆ ಆದ್ಯತೆ ನೀಡಬೇಕು ಎಂದು ಆಧುನಿಕ ಭಗೀರಥ, ಶ್ರವಣಕುಮಾರ ಖ್ಯಾತಿಯ ಮೈಸೂರು ಮೂಲದ ಕೃಷ್ಣ ಕುಮಾರ್ ಹೇಳಿದ್ದಾರೆ.
ಹೆತ್ತ ತಾಯಿಯ ಸಂತೋಷಕ್ಕಾಗಿ ಉದ್ಯೋಗವನ್ನೂ ತೊರೆದು ಆಕೆಯ ಜತೆ ಜತೆಗೆ ಸ್ಕೂಟರ್ನಲ್ಲೇ ದೇಶ ವಿದೇಶ ಹೀಗೆ ಸಾವಿರಾರು ಕಿಮೀ ಸುತ್ತಾಡಿ ತೀರ್ಥಯಾತ್ರೆಯಲ್ಲಿರುವ ಕೃಷ್ಣ ಕುಮಾರ್ ಮಂಗಳವಾರ ಮೂಡುಬಿದಿರೆಗೆ ಆಗಮಿಸಿ ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ಸಂತಸಪಟ್ಟು ಪಟ್ಟರು . 2018ರಲ್ಲಿ ಮೂಡುಬಿದಿರೆಗೆ ತಾಯಿ ಜತೆ ಬಂದಿದ್ದಾಗ ಬರೇ ಸಾವಿರ ಕಂಬದ ಬಸದಿ ನೋಡಿ ಮರಳಿದ್ದನ್ನೂ ಅವರು ನೆನಪಿಸಿಕೊಂಡರು.
ಕಳೆದ 2018 ರ ಜನವರಿಯ ಮಕರ ಸಂಕ್ರಾಂತಿಯ ಮರುದಿನ ಉತ್ತರಾಯಣ ಪುಣ್ಯಕಾಲದಿಂದ ಮಾತೃ ಸೇವಾ ಸಂಕಲ್ಪ ಹೆಸರಿನಲ್ಲಿ ತಂದೆಯ ನೆನಪಲ್ಲಿ ಅವರ ಹಳೆಯ ಚೇತಕ್ ಸ್ಕೂಟರಿನಲ್ಲೇ 72 ರ ಹರೆಯದ ತಾಯಿ ಚೂಡಾರತ್ನ ಅವರ ಜತೆಗೆ ತೀರ್ಥ ಯಾತ್ರೆ ಮಾಡುತ್ತಿರುವ ದಕ್ಷಿಣಾಮೂರ್ತಿ ಕೃಷ್ಣ ಕುಮಾರ್ ಈಗಾಗಲೇ ನೇಪಾಳ, ಮಯನ್ಮಾರ್, ಭೂತಾನ್ ದೇಶ ಸುತ್ತಾಡಿ ಭಾರತದ ಉದ್ದಗಲ ಸಂಚಾರ ಹೊರಟಿದ್ದಾರೆ. ಈ ವರೆಗೆ ಬರೋಬ್ಬರಿ 58,175 ಕಿ.ಮೀ ಕ್ರಮಿಸಿ ಸಾವಿರಾರು ದಿನಗಳನ್ನು ಪೂರೈಸಿರುವ ಅವರ ಯಾತ್ರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ತಲುಪಿದೆ.
ಮಂಗಳವಾರ ಜೈನಕಾಶಿ
ಮೂಡುಬಿದಿರೆಯಲ್ಲಿ ಪೇಟೆಯ ಪುರಾತನ ಗೌರೀ ದೇವಸ್ಥಾನ, ಶ್ರೀ ಹನುಮಂತ ದೇವಸ್ಥಾನ, ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನಗಳಿಗೆ ಭೇಟಿ ನೀಡಿರುವ ಅಮ್ಮ ಮಗ ಇಲ್ಲಿನ ಸನ್ನಿಧಾನಗಳಿಂದ ಸ್ಫೂರ್ತಿ ಪಡೆದಿದ್ದಾರೆ ಬಳಿಕ ಹತ್ತಿರದ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂಣರ್ೇಶ್ವರಿಯ ಸನ್ನಿಧಿಗೂ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭೇಟಿಯುದ್ದಕ್ಕೂ ಇಲ್ಲಿನ ಜನತೆಯ ಆಪ್ತ, ಆತಿಥ್ಯ ಮನೋಭಾವದಿಂದ ಪುಳಕಿತರಾಗಿದ್ದೇವೆ. ಕಮರ್ಷಿಯಲ್ ಮನೋಭಾವ ಹೊರತಾದ ನೈಜ್ಯ ಪ್ರೀತಿ, ಆತಿಥ್ಯದ ಜನತೆಯನ್ನು ಕಂಡು ಖುಷಿಯಾಗಿದೆ.
ಜನರ ಪ್ರೀತಿ, ಆದರ, ಆತಿಥ್ಯ ಮುಕ್ತ ಮನಸ್ಸು, ಹೃದಯವೈಶಾಲ್ಯತೆಗೆ ಮನಸೋತಿದ್ದೇವೆ ಎನ್ನುವ ಅವಿವಾಹಿತ ಕೃಷ್ಣ ಕುಮಾರ್ ಲೌಕಿಕ ಬದ್ದತೆಯಿಲ್ಲದೇ ಆಧ್ಯಾತ್ಮಿಕ ಒಲವಿನೊಂದಿಗೆ ಋಷಿ ಜೀವನ ಪಥದಲ್ಲಿ ಮುನ್ನಡೆಯುತ್ತಿದ್ದೇವೆ ಎಂದರು. ವಿಟ್ಲದಲ್ಲಿ ತನ್ನ ತಾಯಿಯ ಸ್ನೇಹಿತೆ ಕಜೆ ಜಯಲಕ್ಷ್ಮೀಯವರ ಭೇಟಿಗಾಗಿ ಅಮ್ಮನ ಜತೆಗೆ ಯಾತ್ರೆ ಮುನ್ನಡೆಸಿಕೊಂಡು ಬಂದಿರುವ ಅವರು ಸ್ಥಳೀಯರ ಪ್ರೀತಿ, ವಾತ್ಸಲ್ಯ ನಿಜಕ್ಕೂ ಅವಿಸ್ಮರಣೀಯ ಅನುಭವ ಎಂದಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಹಲವು ತೀರ್ಥ ಕ್ಷೇತ್ರ , ದೇವಾಲಯಗಳನ್ನು ಸಂದರ್ಶಿಸಿ ಕೇರಳದಾಚೆ ತೆರಳುವ ಯೋಚನೆಯಿಂದೆ ಎಂದವರು ಹೇಳಿದರು.















