ಬಂಟ್ವಾಳ :ನಿತ್ಯ ನಮ್ಮ ಮನೆಗಳಲ್ಲಿ ನಾವು ನಡೆಸುವಂತಹ ಆಚರಣೆಗಳು, ಹಬ್ಬಗಳು ,ನಿತ್ಯವಿಧಿಗಳು ನಮ್ಮ ಪರಂಪರೆಯ ಕೊಂಡಿಗಳಾಗಿ ಸಮಾಜವನ್ನು ಉದ್ದೀಪನಗೊಳಿಸುವ ಕಾರ್ಯ ನಡೆಸುತ್ತವೆ. ನೃತ್ಯ,ನಾಟಕ,ಭೂ ಅಲಂಕಾರದಂತಹ ಲಲಿತ ಕಲೆಗಳು ಕೂಡ ಮಾನವನ ಆಂತರ್ಯದ ಉನ್ನತಿಯನ್ನಲ್ಲದೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸುತ್ತವೆ. ಸರ್ವ ಕ್ಷೇತ್ರಗಳ ಕಲಾವಿದರನ್ನು ಜೊತೆಕೂಡಿಸಿಕೊಂಡು ಪರಂಪರೆಯ ಉಳಿವು, ಇತಿಹಾಸದ ಮೌಲ್ಯಯುತ ಆಚಾರ ವಿಚಾರ ಹಾಗೂ ದೇಶಾಭಿಮಾನ ಮೂಡಿಸುವ ಬಗ್ಗೆ ಪ್ರಯತ್ನಗಳಾಗಬೇಕಿದೆ.ಇಂತಹ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಸಂಸ್ಕಾರ ಭಾರತೀ ಸಂಘಟನೆಯು ನಡೆಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ.ಹೆತ್ತ ಮಾತೆಯನ್ನು ನಾವು ಹೇಗೆ ಪ್ರೀತಿಸುತ್ತೇವೆಯೋ ಮಾತೃ ಭೂಮಿಯನ್ನೂ ಹಾಗೆಯೇ ಪ್ರೀತಿಸಬೇಕು.ಈ ಜಾಗೃತಿಯನ್ನು ಕಲಾವಿದರು ತಮ್ಮತಮ್ಮ ಮಾಧ್ಯಮಗಳ ಮೂಲಕ ಅಭಿವ್ಯಕ್ತಿ ಗೊಳಿಸುತ್ತಾ ಭಾರತದ ಪರಂಪರೆಯ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿ ಹೇಳುವ ಕೆಲಸವಾಗಬೇಕು.ಇದು ಸಂಸ್ಕಾರ ಭಾರತೀ ಇದರ ಆಶ್ರಯದಲ್ಲಿ ಅವಿಶ್ರಾಂತವಾಗಿ ನಡೆಯಲಿ,ತಾಲೂಕಿನ ಸಂಯೋಜಕರಾಗಿ ಆಯ್ಕೆಯಾಗಿರುವ ಅನಿಲ್ ಪಂಡಿತ್ ರವರಿಂದ ಉತ್ತಮ ಕೆಲಸ ಕಾರ್ಯಗಳು ನಡೆಯಲಿ " ಎಂದು ದಯಾನಂದ ಕತ್ತಲ್ಸಾರ್ ಜಾನಪದ ವಿದ್ವಾಂಸರು ಮತ್ತು ನಿಕಟಪೂರ್ವ ಅಧ್ಯಕ್ಷರು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.
ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ , ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ನಡೆದ ಸಂಸ್ಕಾರ ಭಾರತೀ ಬಂಟ್ವಾಳ ತಾಲೂಕು ಘಟಕದ ನೂತನ ಸಂಯೋಜಕರಾಗಿ ನೇಮಕಗೊಂಡ ಅನಿಲ್ ಪಂಡಿತ್ ಇವರ ಪದಗ್ರಹಣ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮ ಇಂದು ಬಿ ಸಿ ರೋಡಿನ ರಕ್ತೇಶ್ವರೀ ದೇವಸ್ಥಾನದ ವಠಾರದಲ್ಲಿ ಸಂಸ್ಕಾರ ಭಾರತೀ,ದಕ್ಷಿಣ ಕನ್ನಡದ ಅಧ್ಯಕ್ಷರಾದ ತಾರಾನಾಥ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ,ಸಂಸ್ಕಾರ ಭಾರತೀಯ ಸಂಯೋಜಕರಾಗಿ ಅನಿಲ್ ಪಂಡಿತ್ ಪದಗ್ರಹಣ ಸ್ವೀಕರಿಸಿದರು. ವ್ಯಾಸ ಪೂರ್ಣಿಮೆಯ ಪ್ರಯುಕ್ತ ನಡೆಸಲಾದ
ಗುರು ವಂದನಾ ಕಾರ್ಯಕ್ರಮದಲ್ಲಿ ಖ್ಯಾತ ನಾಟಿ ವೈದ್ಯರಾದ ಕೊರಗಪ್ಪ ಬೋಂಡಾಲರವರನ್ನು ಸಕಲ ಗೌರವಾದರಗಳ ಜೊತೆಗೆ ಸನ್ಮಾನಿಸಲಾಯಿತು.
ಸಂಸ್ಕಾರ ಭಾರತೀ,ದಕ್ಷಿಣ ಕನ್ನಡ ಜಿಲ್ಲೆಯ ಗೌರವಾಧ್ಯಕ್ಷರಾದ ಸರಪಾಡಿ ಅಶೋಕ್ ಶೆಟ್ಟಿಯವರು ಸ್ವಾಗತಿಸಿ ಜಿಲ್ಲಾ ಅಧ್ಯಕ್ಷರಾದ ತಾರಾನಾಥ ಕೊಟ್ಟಾರಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತ್ಯ ವಿಧಾ ಪ್ರಮುಖ್ ವಿಜಯ ಶೆಟ್ಟಿ ಸಾಲೆತ್ತುರ್ ಸನ್ಮಾನ ಪತ್ರ ವಾಚಿಸಿದರು, ಕೋಶಾಧಿಕಾರಿಗಳಾದ ಸಂಕಪ್ಪ ಶೆಟ್ಟಿಯವರು ವಂದಿಸಿದರು. ಕಮಾರಿ ಮಾನಸ ರವರು ಸಂಸ್ಕಾರ ಭಾರತೀಯ ಧ್ಯೇಯ ಗೀತೆ ಹಾಡಿದರು. ಜನಾರ್ದನ ಅಮ್ಮುಂಜೆ ಯವರು ಕಾರ್ಯಕ್ರಮ ನಿರೂಪಿಸಿದರು.









