Coastal Bulletin

ಮೂಡುಬಿದಿರೆ: ಹದಿನೆಂಟು ಕೆರೆ, ಬಸದಿ, ದೇವಾಲಯಗಳಿಗೆ ಹೆಸರಾದ ಜ್ಞಾನಕಾಶಿ ಮೂಡುಬಿದಿರೆ ಎಂಬ ಊರಿನ ಹೆಸರೂ 18 ಕ್ಕೂ ಅಧಿಕ ರೀತಿ ಬರೆಯಲ್ಪಡುತ್ತಿರುವುದು, ಕರೆಯಲ್ಪಡುತ್ತಿರುವವುದು ಖೇದನೀಯ ಎಂದು ಇತಿಹಾಸಕ್ತ, ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಎಂ. ಗಣೇಶ್ ಕಾಮತ್ ವಿಷಾದ ವ್ಯಕ್ತಪಡಿಸಿದರು. ರೋಟರಿ ಸಮ್ಮಿಲನ್ ಸಭಾಂಗಣದಲ್ಲಿ ಜರಗಿದ ಕ್ಲಬ್ ಸಾಪ್ತಾಹಿಕ ಸಭೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ನಾವು ನೋಡಿ(ರ)ದ ಮೂಡುಬಿದಿರೆ ಕುರಿತು ಮಾತನಾಡಿದ ಅವರು ಮೂಡುಬಿದಿರೆಯ ವೈಶಿಷ್ಠ್ಯ, ಸ್ವಾರಸ್ಯ, ಗಮನಾರ್ಹ ಸಂಗತಿಗಳ ಕುರಿತು ಅಂಕಿ, ಅಂಶಗಳೊಂದಿಗೆ ವಿವರಿಸಿದರು.

ಮೂಡುಬಿದಿರೆಯಲ್ಲಿ ಕಡಲಿಲ್ಲ ಆದರೆ ಕಡಲಕೆರೆಯಿದೆ. ಕುಂಬಾರರೇ ಕೃಷ್ಣ ವೇಷಧಾರಿಯಾಗಿ ಮೊಸರ ಕುಡಿಕೆಗಳನ್ನು ಒಡೆಯುವುದಿದೆ. ನಾಡಿಗೇ ಮಾದರಿಯಾದ ಸಾರ್ವಜನಿಕ ಗಣೇಶೋತ್ಸವವಿದೆ. ಶ್ರೀಕ್ಷೇತ್ರ ಪೊಳಲಿಯ ಜಾತ್ರೆಗೆ ದಿನ ನಿಗದಿ ಪಡಿಸುವ, ಪುರಾಲ್ದ ಚೆಂಡು ತಯಾರಿಯ ಭಾಗ್ಯ ಮೂಡುಬಿದಿರೆಗಿದೆ. ಹಲವು ಕೇರಿ, ಕಟ್ಟೆಗಳಿವೆ. ಹದಿನೆಂಟಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಡಾ. ಎಂ. ಮೋಹನ ಆಳ್ವರಿದ್ದಾರೆ. ಅಪರೂಪ ಎಂಬಂತೆ ಹರಿ ಹರರು ಜತೆಗಿರುವ ದೇವಾಲಯವಿದೆ. ಬ್ರಹ್ಮನ ದೇಗುಲವೂ ಇದೆ. ಜೈನಕಾಶಿ ಮೂಡುಬಿದಿರೆಯಲ್ಲೂ ಬಹುರಂಗದ ಸಾಧಕ 'ಬಾಹುಬಲಿ'ಯವರಿದ್ದಾರೆ. ಊರಿನ ಅಭಿಮಾನದಿಂದ ರತ್ನಾಕರ ಸೇರಿದಂತೆ ಮೂಡುಬಿದಿರೆಯನ್ನು ಹೆಸರಿಗೆ ಅಂಟಿಸಿಕೊಂಡವರಿದ್ದಾರೆ. ಜೈನರ ಪವಿತ್ರ ಧವಲತ್ರಯ ಗ್ರಂಥಗಳ ಮೂಲ ಪ್ರತಿಗಳ ಸಾನಿಧ್ಯ ಇಲ್ಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಮೊದಲ ಕಥೆ ಪ್ರಕಟಿಸಿದ ದಿ.ಪಿ.ಮಾಧವರಾಯ ಭಟ್ಟರ ವಿಶಾಲ ಸಾಹಿತ್ಯ ಮಾಲೆ, ಮೊದಲ ವರ್ಧಮಾನ ಪ್ರಶಸ್ತಿ ಸ್ವಿಕಾರ ಎಲ್ಲವೂ ಮೂಡುಬಿದಿರೆಯಲ್ಲೇ ಎಂದವರು ವಿವರಿಸಿದರು. 

ಅಬ್ಬಕ್ಕ, ಅರಮನೆ, ಅನನಾಸು,ಆಳ್ವಾಸ್, ಆಂಜನೇಯ, ಆದಿಶಕ್ತಿ ಹೀಗೆ ಮೂಡಬಿದಿರೆಯಲ್ಲಿ 'ಅ'ದರದ್ದೇ ಅನೇಕ ವಿಶೇಷತೆಗಳಿವೆ. ಹೆಸರಾದವರಿದ್ದಾರೆ. ಜಿ.ವಿ.ಪೈ, ಎಸ್.ಎನ್. ಮೂಡುಬಿದಿರೆ ಹೀಗೆ ಇನೀಶಿಯಲ್ಗಳ ಮೂಲಕವೇ ಅಪರಿಚಿತರಾದವರೇ ಬಹಳಷ್ಟಿದ್ದಾರೆ.ಮಾರ್ಪಡಿ ಪ್ರಾಂತ್ಯ ಹೀಗೆ ಎರಡು ಗ್ರಾಮಗಳು, ಕೊಣಾಜೆ ಕಲ್ಲು -ಕೊಡಂಗಲ್ಲು ಎರಡು ವಿಶೇಷ ಕಲ್ಲುಗಳು ಹೀಗೆ ಅನೇಕ ಅವಳಿ ಸಂಗತಿಗಳಿವೆ ಎಂದವರು

ಅಚ್ಚರಿಯ ಅಂಶಗಳನ್ನು ವಿವರಿಸಿದರು. 

ನಾಗರಿಕ ಜವಾಬ್ದಾರಿಯ ಶಿಕ್ಷಣ:

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಎಳೆಯರು ಬದುಕಿನ ಶಿಕ್ಷಣದಿಂದ ವಂಚಿತರಾಗಿ ಮೊಬೈಲ್ಗೆ ಅಂಟಿಕೊಂಡಿದ್ದಾರೆ. ಅವರಲ್ಲಿ ಸಾಮಾಜಿಕ ಶಿಸ್ತು, ಬದ್ದತೆಯ ಅರಿವು, ಕಾಳಜಿ ಮೂಡಿಸಲು ಎಲ್.ಕೆ.ಜಿ. ಹಂತದಿಂದಲೇ ತಿಳುವಳಿಕೆ ಮೂಡಿಸುವ ವ್ಯವಸ್ಥೆಯಾಗಬೇಕಿದೆ. ಮುಂದಿನ ಹತ್ತು ವರ್ಷಗಳ ಗುರಿಯೊಂದಿಗೆ ಎಳೆಯರಲ್ಲಿ ಹಂತ ಹಂತವಾಗಿ ಬೆಳೆಸುವ ಚಿಂತನೆಯನ್ನು ರೋಟರಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ.ಕೆ.ಥೋಮಸ್ ಹಂಚಿಕೊಂಡರು. 

ಪುರಸಭಾ ಸದಸ್ಯರೂ ಆಗಿರುವ ಪಿ.ಕೆ.ಥೋಮಸ್ ಈ ಬಗ್ಗೆ ಪುರಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿರುವುದನ್ನು ಉಲ್ಲೇಖಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೂಡುಬಿದಿರೆ ತಾಲೂಕಿನಲ್ಲಿ ಅದನ್ನು ಜಾರಿಗೊಳಿಸುವ ಬಗ್ಗೆ ಸಲಹೆ ಕೇಳಿದರು. 

ಈ ಚಿಂತನೆ ಯೋಜನೆ ರೋಟರಿ ಸದಸ್ಯರ ಮೂಲ ಆಸಕ್ತಿಯಾದ ಕಾರಣ ಅದನ್ನು ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ ಬಳಿಕ ವಿಸ್ತರಿಸುವಂತೆ ರೋಟರಿ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎ.ಕೆ.ರಾವ್ ಸಲಹೆಯಿತ್ತರು. ಶಿಕ್ಷಣ ವ್ಯವಸ್ಥೆಯ ಮೂಲಕ ಅರಿವು ಮೂಡಿಸುವ ಕಾರಣ ಇದನ್ನು ತಜ್ಞರ ನೆರವಿನಿಂದ ಜಾರಿಗೊಳಿಸುವಂತೆ ಡಾ.ಮುರಳೀಕೃಷ್ಣ ಸೂಚಿಸಿದರು. 

ರೋಟರಿ ಚ್ಯಾರಿಟೇಬಲ್ ಟ್ರಸ್ಟ್ ಕಾರ್ಯದಶರ್ಿ ರವಿಪ್ರಸಾದ್ ಉಪಾಧ್ಯಾಯ, ನಾರಾಯಣ ಪಿ.ಎಂ.,ಶ್ರೀಕಾಂತ್ ಕಾಮತ್, ಡಾ.ವಸಂತ ಟಿ., ಡಾ.ಪುಂಡಿಕಾ ಗಣಪಯ್ಯ ಭಟ್, ಪತ್ರಕರ್ತ ಧನಂಜಯ ಮೂಡುಬಿದಿರೆ ಮತ್ತಿತರರು ಉಪಸ್ಥಿತರಿದ್ದರು. 

ರೋಟರಿ ಅಧ್ಯಕ್ಷ ಮಹಮ್ಮದ್ ಆರೀಪ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅವಿಲ್ ಡಿ.ಸೋಜಾ ವಂದಿಸಿದರು.

Leave a Comment