ಬಂಟ್ವಾಳ :"ನಮ್ಮ ಶಾಸ್ತ್ರ ಗ್ರಂಥಗಳಲ್ಲ ಸಾರುವುದೇ, ಮೋಕ್ಷವೇ ಪರಮ ಪುರುಷಾರ್ಥ ಎಂದು, ಅದನ್ನು ಸಾಧಿಸುವುದೇ ಮನುಷ್ಯ ಜನ್ಮದ ಶ್ರೇಷ್ಠ ಗುರಿಯಾಗಿದೆ, ನಮ್ಮ ಐಹಿಕ ಕರ್ತವ್ಯಗಳನ್ನು ಭಗವಂತನ ಸೇವೆ ಎಂಬ ಮನೋಭಾವನೆ ಯೊಂದಿಗೆ ಮಾಡುತ್ತಾ, ಇಂತಹ ಪುಣ್ಯಕ್ಷೇತ್ರಗಳಲ್ಲಿ ,ಸಾಧನೆ - ಸೇವೆ ಮಾಡಿದರೆ ನಮ್ಮ ಜೀವನವು ಸಾರ್ಥಕವಾಗುವುದು".ಎಂದು ವೇದಮೂರ್ತಿ ವಿದ್ವಾನ್ ಶ್ರೀ ಶಶಾಂಕ ಭಟ್ಟರು ನಾಲ್ಕುೂರು ಹೇಳಿದರು.
ಅವರು ನರಿಕೊಂಬಿನಲ್ಲಿರುವ, ವಿವೇಕ ಕಿರಣ ಮಂದಿರದ 15 ನೇ ವರ್ಧಂತ್ಯುತ್ಸವದ ಅಂಗವಾಗಿ ಡಿ.17ರಂದು ಶ್ರೀ ಹರಿವಂಶ ಪುರಾಣ ಪ್ರವಚನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ,
"ರಾಮಾಯಣ ಮಹಾಭಾರತ ಇವುಗಳು ನಮ್ಮ ದೇಶದ ನೈಜ ಇತಿಹಾಸ ಗ್ರಂಥಗಳಾಗಿದ್ದು ವೇದ ಉಪನಿಷತ್ತುಗಳ ಉನ್ನತ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಲು ವೇದವ್ಯಾಸರು 18 ಪುರಾಣಗಳನ್ನು ರಚಿಸಿದರು. ಇಂತಹ ಪುರಾಣ ಪ್ರವಚನಗಳ ಶ್ರವಣದಿಂದ ಭಗವದ್ ಭಕ್ತಿಯು ಎಲ್ಲರಿಗೂ ಪ್ರಾಪ್ತವಾಗಿ ಲೋಕಕ್ಕೆ ಒಳಿತಾಗಲಿ", ಎಂದು ಶುಭ ಹಾರೈಸಿದವರು.
ಸ್ವಾಮಿ ವಿವೇಕಾನಂದರ ದಿವ್ಯ ಲೀಲಾಕ್ಷೇತ್ರವಾದ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾರ್ಕ್ ನ ಅಂಗ ಸಂಸ್ಥೆಯಾದ ವಿವೇಕ ಜಾಗ್ರತ ಬಳಗ ಬಂಟ್ವಾಳದ ಕೇಂದ್ರದ
ನರಿಕೊಂಬು ಗ್ರಾಮದಲ್ಲಿರುವ "ವಿವೇಕ ಕಿರಣ" ಮಂದಿರ, ಇದು ಸ್ವಾಮಿ ವಿವೇಕಾನಂದರು, ಶ್ರೀ ರಾಮಕೃಷ್ಣರು ಮತ್ತು ಶಾರದಾ ಮಾತೆಯವರ ದಿವ್ಯ ದೇಗುಲವಾಗಿದೆ.
ಶ್ರೀದೇವರ ಹಾಗೂ ಶ್ರೀ ಹರಿವಂಶ ಪುರಾಣ ಪುಸ್ತಕದ ಮೆರವಣಿಗೆಯು ನೂರಾರು ಸದ್ಭಕ್ತರ ಸಹಿತ ಮೊಗರನಾಡು ಲಕ್ಷ್ಮೀ ನರಸಿಂಹ ದೇವಸ್ಥಾನದವರೆಗೆ ಶಿಸ್ತು ಬದ್ಧವಾಗಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಮನೋಜ್ ಕಟ್ಟೆಮಾರ್, ಮಂತ್ರ ದೇವತಾ ಸಾನ್ನಿಧ್ಯ ಕಟ್ಟೆಮಾರು ಅಮ್ಟೂರು ಇವರು ಭಾಗವಹಿಸಿದ್ದರು.ಡಿವೈನ್ ಪಾರ್ಕ್ ನ ಪದಾಧಿಕಾರಿ ಮಧುಸೂಧನ್ ಶಂಭೂರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರವಚನಕಾರರಾದ ವೇದಮೂರ್ತಿ ವಿದ್ವಾನ್ ಶ್ರೀ ಶ್ರೀನಿವಾಸ ಭಟ್ಟರಿಂದ ಹರಿವಂಶ ಪುರಾಣ ಪ್ರವಚನವು ಪ್ರಾರಂಭಗೊಂಡಿತು.
ರೋಹಿದಾಸ್ ಕುಂದರ್ ಇವರು ಸ್ವಾಗತಿಸಿ, ವಸಂತಿ ಆಚಾರ್ಯ ವಂದಿಸಿದರು, ಮಂಗಳಾರತಿಯ ನಂತರ ಅನ್ನ ಪ್ರಸಾದ ನಡೆಯಿತು.














