Coastal Bulletin

ಬಂಟ್ವಾಳ:ದೇಶಕ್ಕೆ ಒಂದು ಧರ್ಮ ಇದ್ದಂತೆ ಆತ್ಮವೂ ಇದೆ. ಪ್ರಕೃತಿ ಆರಾಧಿಸುತ್ತಾ ಜಗತ್ತಿಗೆ ಒಳಿತನ್ನೇ ಬಯಸುವ ದೇಶವೊಂದು ಇದ್ದರೆ ಅದು ಭಾರತ ಮಾತ್ರ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಹೇಳಿದ್ದಾರೆ. ಇಲ್ಲಿನ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಸಹಭಾಗಿತ್ವದಲ್ಲಿ ಮಂಗಳವಾರ ನಡೆದ 'ಸ್ವತ್ವದ ಆಧಾರದ ಮೇಲೆ ಭಾರತದ ಪುನರುತ್ಥಾನ' 'ರಾಷ್ಟ್ರ ಮಟ್ಟದ ವಿಚಾರ ಸಂಕಿರಣ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, 'ಸ್ವತ್ವದ ಶಕ್ತಿ ಮಾತ್ರ ಜಗತ್ತನ್ನು ಆಳಬಲ್ಲದು ಎಂಬುದು ಕಳೆದ 9 ವರ್ಷಗಳಿಂದ ಸಾಬೀತಾಗುತ್ತಿದೆ. ಈ ಹಿಂದೆ ಎಲ್ಲಾ ರಾಷ್ಟ್ರಗಳ ಶಸ್ತ್ರಾಸ್ತ್ರಗಳಿಗೆ ಮಾರುಕಟ್ಟೆ ಒದಗಿಸುತ್ತಿದ್ದ ಭಾರತ ಇಂದು 23 ಪಟ್ಟು ರಫ್ತು ಹೆಚ್ಚಿಸಿಕೊಂಡಿದೆ. 'ಜಗತ್ತಿಗೆ ಭಾರತವೇ ಭರವಸೆ' ಯಾಗಿದ್ದು, ದೇಶದಲ್ಲಿ ಮತ್ತೆ ಪರಮ ವೈಭವ ಮರುಕಳಿಸಲಿದೆ' ಎಂದರು.

ಶಿವಮೊಗ್ಗ ವಿಶ್ರಾಂತ ಪ್ರಾಚಾರ್ಯ ಪ್ರೊ.ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಭಾರತವು ಆಧ್ಯಾತ್ಮಿಕ ರಾಷ್ಟ್ರವಾಗಿರುವ ಪರಿಣಾಮ ಅಭಿವೃದ್ಧಿ ಹೊಂದುವುದಿಲ್ಲ ಎಂಬ ತಪ್ಪು ಕಲ್ಪನೆ ಕಳೆದ 200 ವರ್ಷಗಳಿಂದ ಇದೆ. ಆಧ್ಯಾತ್ಮಿಕ ಮತ್ತು ಲೌಕಿಕ ಸಮತೋಲನ ಕಾಯ್ದುಕೊಂಡು ಕ್ಷಿಪ್ರಗತಿಯಲ್ಲಿ ಆರ್ಥಿ ಕತೆ ಏರುಗತಿ ಕಂಡಿದೆ. ಭಾರತದಲ್ಲಿ ಕೌಟಿಲ್ಯನ ಬದಲಾಗಿ ವಿದೇಶಿ

ಅರ್ಥಶಾಸ್ತ್ರ ತುಂಬಿಕೊಂಡಿದೆ. ಭಾರತದ ಆರ್ಥಿಕತೆ ಜಗತ್ತಿಗೆ ಮಾದರಿಯಾಗಿ ಇತರ ದೇಶಗಳಿಗೆ ಅನುಕರಣೀಯವಾಗಿದೆ ಎಂದರು.

ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಆಡಳಿತ ಮತ್ತು ನಿರ್ವಹಣೆಯಲ್ಲಿ ಭಾರತೀಯ ಮಾದರಿ ಶ್ರೇಷ್ಟವಾಗಿದೆ ಎಂದರು.

ಸಮಾರೋಪ:

ಲೇಖಕ ಚಕ್ರವರ್ತಿ ಸೂಲಿಬೆಲೆ ಸಮಾರೋಪ ಬಾಷಣ ಮಾಡಿದರು. 'ಭಾರತೀಯ ಧರ್ಮ ಮತ್ತು ಚಿಂತನೆಯಲ್ಲಿ ವಿಶ್ವಮಾನ್ಯತೆ ಪರಿಕಲ್ಪನೆ ಇದೆ. ದೇಶದಲ್ಲಿ ವಿದೇಶೀಯರು ಬಿತ್ತಿದ ಜಾತಿ ಮತ್ತಿತರ ಒಡಕು ನಿವಾರಣೆಗೆ ಭಾರತೀಯ ಅಂತಸತ್ವ ಎಂಬ ಸ್ವತ್ವದ ಆಧಾರದ ಮೇಲೆ ಮಾತ್ರ ಭಾರತದ ಪುನರುತ್ಥಾನ ಸಾಧ್ಯ' ಎಂದರು.  

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ , ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಇದ್ದರು.

Leave a Comment