Coastal Bulletin

ಮಂಗಳೂರು : 'ರಾಷ್ಟ್ರದ ವಿವಿಧೆಡೆ 75ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕರಾವಳಿ ಭಾಗದ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ನಾಗರಿಕರ ಕರ್ತವ್ಯ. ದೇಶದ ಪ್ರಧಾನಿಯವರ ಕರೆಯಂತೆ ಸ್ಥಳೀಯ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕಾರ್ಯವೆಸಗಬೇಕಾಗಿದೆ. ಅದಕ್ಕಾಗಿ ಭಾರತ ಸ್ವಾತಂತ್ರ್ಯದ ಪ್ರಥಮ ಮಹಿಳಾ ಹೋರಾಟಗಾರ್ತಿ ಅಬ್ಬಕ್ಕ ರಾಣಿಗೆ ಗೌರವಾರ್ಪಣೆ ಮಾಡುವ ಉದ್ದೇಶವಿರಿಸಿ ಪ್ರತಿಷ್ಠಾನ ದೊಂದಿಗೆ ಪಾಲಿಕೆ ಕೈಜೋಡಿಸಿದೆ' ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಮತ್ತು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಿದ ಎರಡು ದಿನಗಳ 'ನಮ್ಮ ಅಬ್ಬಕ್ಕ - 2022 : ಅಮೃತ ಸ್ವಾತಂತ್ರ್ಯ ಸಂಭ್ರಮ' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಹಾಗೂ  ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ದೀಪ ಪ್ರಜ್ವಲನೆ ಮಾಡಿದರು. 

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್,ಉಪ ಮೇಯರ್ ಸುಮಂಗಳ ರಾವ್, ಕಲ್ಕುರಾ ಪ್ರತಿಷ್ಠಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಭಾರತೀಯ ಸ್ಟೇಟ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಿ.ಕೆ.ಮನೋಹರ, ವೀರರಾಣಿ ಅಬ್ಬಕ್ಕ ಜೈನ್ ಮಹಿಳಾ ಸಂಘದ

ಅಧ್ಯಕ್ಷೆ ಸುಮನಾ ವೈ.ಜೈನ್ ಮುಖ್ಯ ಅತಿಥಿಗಳಾಗಿದ್ದರು.

 ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. ಸಾರಂಗ್ ಸಮುದಾಯ ಬಾನುಲಿ ಯ ಆರ್ ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.

ಸಾಂಸ್ಕೃತಿಕ ಸಂಭ್ರಮ:

ಮೊದಲ ದಿನದ ಕಾರ್ಯಕ್ರಮದಲ್ಲಿ ಶೃತಿ-ಲಯ ಕಲಾಕೇಂದ್ರ ಕುತ್ತಾರ್ ಇವರಿಂದ 'ಜಾನಪದ ವೈವಿಧ್ಯ', ಮಸ್ಕಿರಿ ಕುಡ್ಲದ ದೀಪಕ್ ರೈ ಪಾಣಾಜೆ ಮತ್ತು ಸಂಗಡಿಗರಿಂದ 'ತೆಲಿಕೆ ಬಂಜಿ ನಿಲಿಕೆ' ಹಾಸ್ಯ ರಂಜನೆ, ಕೊಣಾಜೆ ನೃತ್ಯ ಲಹರಿ ನಾಟ್ಯಾಲಯದ ವಿ.ರೇಷ್ಮಾ ನಿರ್ಮಲ್ ಬಳಗದಿಂದ ಭಾಸ್ಕರ ರೈ ಕುಕ್ಕುವಳ್ಳಿ ವಿರಚಿತ 'ಬನ್ನಿ ಅಬ್ಬಕ್ಕನ ನಾಡಿಗೆ..' ಗೀತ ನೃತ್ಯ ಮತ್ತು ಕಲರ್ಸ್ ಕನ್ನಡ ಎದೆತುಂಬಿ ಹಾಡಿದೆನು ಖ್ಯಾತಿಯ ಸಂದೇಶ್ ನೀರ್ ಮಾರ್ಗ ಹಾಗೂ ಡಾ.ವೈಷ್ಣವಿ ಕಿಣಿ ಅವರಿಂದ 'ಅಮೃತ ಸುಧಾ' ಸಂಗೀತ ಸೌರಭ ಜರಗಿತು.

Leave a Comment