ಬಂಟ್ವಾಳ: ಡಿ. ದೇವರಾಜ ಅರಸು ಪ್ರಶಸ್ತಿ ಪಡೆಯುವಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಲು ನಮಗೆ ಮೂಲ ಪ್ರೇರಣೆ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪನವರು ಎಂದು ರಾಜ್ಯಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿಗೆ ಪಾತ್ರರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಹೇಳಿದರು.
ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ತೆರಳುವ ಮುನ್ನ ಅವರು ಬಂಟ್ವಾಳ ಬೈಪಾಸ್ ನಲ್ಲಿ ಇತ್ತೀಚೆಗಷ್ಟೆ ನಾಮಕರಣಗೊಂಡ ಡಾ. ಅಮ್ಮೆಂಬಳ ಬಾಳಪ್ಪ ವೃತ್ತದಲ್ಲಿ ಬಾಳಪ್ಪರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಉಳುವವನೇ ಹೊಲದೊಡೆಯ ಕಾರ್ಯಕ್ರಮ ಬಂಟ್ವಾಳದ ಮನೆ ಮನೆಯಲ್ಲಿ ಅನುಷ್ಠಾನಗೊಳ್ಳಲು ಅಮ್ಮೆಂಬಳ ಬಾಳಪ್ಪನವರು ಕಾರಣ. ನಿರ್ಗತಿಕರು, ಬಡವರಿಗೆ ಜಾತಿ, ಧರ್ಮ ನೋಡದೆ ಅವರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿವರು. ಅವರ ನೆರಳಲ್ಲಿ ಬಂದ ನನಗೆ ದೇವರಾಜ ಅರಸು ಪ್ರಶಸ್ತಿಯನ್ನು ಸರಕಾರ ನೀಡಿದೆ. ಈ ಪ್ರಶಸ್ತಿ ಡಾ. ಅಮ್ಮೆಂಬಳ ಬಾಳಪ್ಪರಿಗೆ ಸಲ್ಲಬೇಕಿತ್ತು ಎಂದರು. ಕರಾವಳಿ ಕುಂಬಾರ ಯುವ
ವೇದಿಕೆಯ ನೇತೃತ್ವದಲ್ಲಿ ಬೈಪಾಸ್ ನ ವೃತ್ತಕ್ಕೆ ಅಮ್ಮೆಂಬಳ ಬಾಳಪ್ಪ ಹೆಸರನ್ನು ನಾಮಕರಣ ಮಾಡಿ ಗೌರವ ಸಲ್ಲಿಸಿದೆ. ಇದನ್ನು ಗಮನಿಸಿಯಾದರೂ ಅವರ ಜನ್ಮಶತಾಬ್ದಿಯ ಈ ಸಂದರ್ಭದಲ್ಲಿ ಜಿಲ್ಲಾಡಳಿತ ದೊಡ್ಡ ಮಟ್ಟದಲ್ಲಿ ಅಮ್ಮೆಂಬಳ ಬಾಳಪ್ಪರ ಹೆಸರನ್ನು ಉಳಿಸುವ ಕಾರ್ಯ ಮಾಡಬೇಕಿದೆ ಎಂದರು.
ಈ ಸಂಧರ್ಭದಲ್ಲಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ವಿಭಾಗಿಯ ಕೋಶಾಧಿಕಾರಿ ವಿಠಲ ಪಲ್ಲಿಕಂಡ,ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ, ಸದಸ್ಯರಾದ ನಾರಾಯಣ ಹೊಸ್ಮಾರ್ ,ರಾಮ, ರವಿ ನೆರಂಬೋಳು, ವಿತೇಷ್ ಕಾಮಾಜೆ, ಗಣೇಶ್ ಕಾಮಾಜೆ, ನಾಗೇಶ್ ಬಾಳೆಹಿತ್ಲು, ಸ್ಥಳೀಯರಾದ ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು.















