ಫರಂಗಿಪೇಟೆ: ಬೃಹತ್ ಹಿಂದೂ ಸಂಗಮ, ಆಕರ್ಷಕ ಶೋಭಾ ಶೋಭಯಾತ್ರೆ. ದೇಶದ್ರೋಹಿ ಶಕ್ತಿಗಳು ನಮ್ಮ ಅಸ್ಥಿತ್ವವನ್ನು ಪ್ರಶ್ನೆ ಮಾಡುತ್ತಿದೆ: ಅರುಣ್ ಕುಮಾರ್.

Coastal Bulletin
ಫರಂಗಿಪೇಟೆ: ಬೃಹತ್ ಹಿಂದೂ ಸಂಗಮ, ಆಕರ್ಷಕ ಶೋಭಾ ಶೋಭಯಾತ್ರೆ. ದೇಶದ್ರೋಹಿ ಶಕ್ತಿಗಳು ನಮ್ಮ ಅಸ್ಥಿತ್ವವನ್ನು ಪ್ರಶ್ನೆ ಮಾಡುತ್ತಿದೆ: ಅರುಣ್ ಕುಮಾರ್.

ಬಂಟ್ವಾಳ: ಹಿಂದೂ ಸಮಾಜ ಸಂಘಟಿತರಾಗಿ ನಮ್ಮ ಸಂಸ್ಕೃತಿ- ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸುವ ಅನಿವಾರ್ಯತೆಯಲ್ಲಿ ನಾವಿದ್ದೇವೆ, ದೇಶದೊಳಗಿನ ವಿಕೃತ ಮನಸ್ಸುಗಳು ದೇಶದ ನಾಯಕತ್ವವನ್ನು ಪ್ರಶ್ನಿಸಿ ಸುಳ್ಳು ಆರೋಪಗಳನ್ನು ಹೊರಿಸಿ ಪ್ರಚೋದಿಸುವ ಕಾರ್ಯ ನಡೆಸುತ್ತಿದೆ. ಪ್ರಸ್ತುತ ಜಾಗತಿಕ ಗೂಂಡಾಗಿರಿ ಎಲ್ಲಾ ದೇಶದಲ್ಲಿ ನಡೆಯುತ್ತಿದೆ. ದೇಶದ್ರೋಹಿ ಶಕ್ತಿಗಳು ನಮ್ಮ ಅಸ್ಥಿತ್ವವನ್ನು ಪ್ರಶ್ನೆ ಮಾಡುತ್ತಿದೆ. ಬಾಂಗ್ಲಾ, ನೇಪಾಳ, ವೆನುಜುವೆಲಾ ದಂತಹ ಪರಿಸ್ಥಿತಿ ನಮ್ಮ‌ ದೇಶದಲ್ಲಿ ಬಾರದಿರಲು ನಾಗರಿಕರೆಲ್ಲಾ ಜಾಗೃತರಾಗಿರಬೇಕು ಎಂದು ಆರ್ ಎಸ್ ಎಸ್ ಕರ್ನಾಟಕ ಪ್ರಾಂತ ಪ್ರಚಾರಕ ಪ್ರಮುಖ್ ಅರುಣ್ ಕುಮಾರ್ ಹೇಳಿದರು.

ಅವರು ಫರಂಗಿಪೇಟೆ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ‌ ವತಿಯಿಂದ ಫರಂಗಿಪೇಟೆ ವಿಜಯನಗರದ ಶ್ರೀ ಆಂಜನೇಯ ದೇವಸ್ಥಾನದ ವಠಾರದಲ್ಲಿ ಆದಿತ್ಯವಾರ ಸಂಜೆ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಹಿಂದೂಗಳಾದ ನಾವೆಲ್ಲ ಮುಂದಿನ 25 ವರ್ಷದ ಬಳಿಕ ನಮ್ಮ‌ ಪೀಳಿಗೆ ಹೇಗಿರುತ್ತದೆ ಎನ್ನುವುದನ್ನು ಯೋಚನೆ ಮಾಡಬೇಕಾಗಿದೆ. ಹಿಂದು ದುರ್ಬಲವಾದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ ಹಿಂದೂ ಸಂಘಟಿತನಾದಾಗ ಸಮಸ್ಯೆಗಳು ಓಡಿಹೋಗುತ್ತದೆ. ಹಿಂದೂ ಧರ್ಮ ಅನಾದಿ, ಅನಂತವಾಗಿದೆ.‌ಸೂರ್ಯ ಚಂದ್ರ ಇರುವವರೆಗೂ ಹಿಂದೂ ಧರ್ಮ ಇರುತ್ತದೆ ಎಂದು ತಿಳಿಸಿದರು.

ಪುದು ಗೋವಿನತೋಟ ರಾಧ ಸುರಭಿ ಗೋ ಮಂದಿರದ ಭಕ್ತಿ ಭೂಷಣದಾಸ ಪ್ರಭುಜಿ ಮಾತನಾಡಿ ವಿದೇಶಿಯರನ್ನು ಅನುಕರಣೆ ಮಾಡದೆ ಸ್ವದೇಶಿಗಳಾಗಿ ಉಳಿದರೆ ಸಾಕು ಹಿಂದೂ ಧರ್ಮ ಉಳಿಯುತ್ತದೆ,ಭಗವಂತನ ಅವತಾರಗಳು ಭಾರತದಲ್ಲೇ ಆಗಿದ್ದು, ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವು ಧನ್ಯರು. ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳನ್ನು ಪಾಲಿಸಿದಾಗ ನಮ್ಮ ಹಿಂದೂ ಧರ್ಮ ಕೂಡ ಉಳಿಯುತ್ತದೆ. ಸ್ವದೇಶಿ ಉತ್ಪನ್ನಗಳನ್ನು ಉಪಯೋಗಿಸಿ ಧರ್ಮವನ್ನು ರಕ್ಷಣೆಯ ಕಾರ್ಯ ಮಾಡೋಣ ಎಂದರು.

ಮಹಿಳಾ ವಕ್ತಾರೆ ಲತಾ ಶ್ರೀನಿವಾಸ್ ತುಂಬೆ ಮಾತನಾಡಿ, ಹಿಂದೂ

ಸಮಾಜ ಆಧುನಿಕತೆಯ ಭರಾಟೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದು, ನಮ್ಮ ಹಬ್ಬ- ಹರಿದಿನಗಳನ್ನು ಮರೆತು ಬಿಟ್ಟಿದ್ದೇವೆ. ಮೊಬೈಲ್ ಸ್ಟೇಟಸ್, ರೀಲ್ಸ್ ಗಳಲ್ಲಿ ಬ್ಯುಸಿಯಾಗಿದ್ದು, ದೈವ- ದೇವರ ಕಾರ್ಯಕ್ರಮಗಳನ್ನೂ ಚಿತ್ರೀಕರಣ ಮಾಡುವುದರಲ್ಲಿ ತೊಡಗಿದ್ದೇವೆ. ನಮಗೆ ನಾವೇ ಶತ್ರುಗಳಾಗುವ ಬದಲು ಎಚ್ಚೆತ್ತುಕೊಂಡು ಬದಲಾಗುವುದು ಅನಿವಾರ್ಯವಾಗಿದೆ ಎಂದರು.

ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು, ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕರ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕಡೆಗೋಳಿ ಪೊಳಲಿ ದ್ವಾರದಿಂದ ಆಕರ್ಷಕ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ ನೀಡಿದರು.

ಪ್ರಮುಖರಾದ ಪ್ರಕಾಶ್ಚಂದ್ರ ರೈ ದೇವಸ್ಯ, ಉಮೇಶ್ ಶೆಟ್ಟಿ ಬರ್ಕೆ, ಚಂದ್ರಶೇಖರ ಗಾಂಭೀರ ಫರಂಗಿಪೇಟೆ, ರವೀಂದ್ರ ಕಂಬಳಿ,ಗಣೇಶ್ ಸುವರ್ಣ ತುಂಬೆ, ಅನಿಲ್ ಪಂಡಿತ್, ಪದ್ಮನಾಭ ಪುಚಂಮೆ, ದಿನೇಶ್ ಶೆಟ್ಟಿ ಕೊಟ್ಟಿಂಜ,ಗಿರೀಶ್ ಶೆಟ್ಟಿ ಕುಂಪಣಮಜಲು  ಮತ್ತಿತರರು ಉಪಸ್ಥಿತರಿದ್ದರು.

ತಾರನಾಥ ಕೊಟ್ಟಾರಿ ತೇವು ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು.‌ ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಗೋಪೂಜೆ,ವಂದೇ ಮಾತರಂ ಶತಕಂಠ ಗಾಯನ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Comment