ಬಂಟ್ವಾಳ: ತಾಲೂಕಿನ ಅಮ್ಟಾಡಿಗ್ರಾಮದ ಅಜಕಲ ಎಂಬಲ್ಲಿ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ಸುಮಾರು ಮೂರು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ "ವಿಶ್ವಕರ್ಮಸಭಾಭವನ" ದ ಲೋಕಾರ್ಪಣೆ ಜಾಗೂ ವಿಶ್ವಕರ್ಮ ಯಜ್ಞ ಮೇ.20 ಮತ್ತು 21 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಲ.ಸುಧಾಕರ ಆಚಾರ್ಯ ತಿಳಿಸಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸರಕಾರದಿಂದ 1ಕೋ.ರೂ.ಅನುದಾನ ದೊರಕಿದ್ದು ಉಳಿದಂತೆ ದಾನಿಗಳ ಸಹಕಾರದೊಂದಿಗೆ ಈ ಸಭಾಭವನವನ್ನು ನಿರ್ಮಿಸಲಾಗಿದ್ದು, ಮುಂದಿನ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚುವರಿ ಅನುದಾನವನ್ನು ಹಿಂದುಳಿದ ವರ್ಗದ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಲ್ಲಿ ಮನವಿ ಮಾಡಲಾಗಿದ್ದು,ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಲೋಕಕಲ್ಯಾಣಾರ್ಥವಾಗಿ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಹಾಗೂ ಹಾಸನ ಆರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಯವರ ಉಪಸ್ಥಿತಿಯಲ್ಲಿ "ವಿಶ್ವಕರ್ಮ ಯಜ್ಞ"ವನ್ನು ಆಯೋಜಿಸಲಾಗಿದೆ ಎಂದ ಅವರು ಎರಡು ದಿನಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಸುನೀಲ್ ಕುಮಾರ್ ,ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ರಾಜೇಶ್ ನಾಯ್ಕ್ ,ಮಾಜಿಸಚಿವ ರಮಾನಾಥ ರೈ ಸೇರಿದಂತೆ
ಸಮಾಜದ ಮತ್ತು ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಆದೇರೀತಿ ಎರಡು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮದ ಜತೆಗೆ ದಾನಿಗಳಿಗೆ ಗೌರವಾರ್ಪಣೆ,ಭಜನಾ ಸಂಕಿರ್ತನೆ, ಹಾಗೆಯೇ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ವಿಶೇಷ ನೃತ್ಯ ಪ್ರದರ್ಶನ,ಹಿಂದೂಸ್ತಾನಿ ಕೊಳಲು ವಾದನ,ತೆಂಕು-ಬಡಗು ಯಕ್ಷಗಾನ ವೈಭವ, ರಾಮಾಯಣ ದರ್ಶನಂ,ಸಮಿತಿ ಸದಸ್ಯರಿಗೆ ಗೌರವಾಭಿನಂದನೆ,ಕರಾಟೆ ಪ್ರದರ್ಶನ ,ಸಂಗೀತ ರಸಸಂಜೆ ನಡೆಯಲಿದೆ ಎಂದು ವಿವರಿಸಿದರು. ಯಜ್ಞಕ್ಕು ಮುನ್ನ ಯತಿಧ್ವಯರನ್ನುಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಸಭಾವನದವರೆಗೆ ವೈಭವದ ಮೆರವಣಿಯಲ್ಲಿ ಕರೆತರಲಾಗುವುದು ಎಂದು ವಿವರಿಸಿದ ಅವರು ಸಭಾಭವನದಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು, ಮುಂದಿನದಿನದಲ್ಲಿ ಇದೇ ಸ್ಥಳದಲ್ಲಿ ವಿದ್ಯಾಸಂಸ್ಥೆ,ಹಾಸ್ಟೆಲ್ ನಿರ್ಮಿಸುವ ಯೋಚನೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಟ್ಟಡ ಸಮಿತಿ ಗೌರವಾಧ್ಯಕ್ಷ ಲೋಕೇಶ್ ಆಚಾರ್ಯ,ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ,ಪದಾಧಿಕಾರಿಗಳಾದ ಸಂದೀಪ್ ಬಿ.ಆಚಾರ್ಯ,ಜಯಚಂದ್ರ ಆಚಾರ್ಯ ಸರಪಾಡಿ,ಸುನೀಲ್ ಬಿ.ಆಚಾರ್ಯ ಮೊದಲಾದವರಿದ್ದರು.














