Coastal Bulletin

ಬಂಟ್ವಾಳ: ಕಾಂಗ್ರೆಸ್ ಯಾವತ್ತೂ ಮತೀಯ ರಾಜಕಾರಣ ಮಾಡೋದೇ ಇಲ್ಲ. ಆದರೆ ಬಿಜೆಪಿಗರ ಭಾಷಣ ಇನ್ನೂ ಹಿಂದುತ್ವದ ಸುತ್ತ ಸುತ್ತುತ್ತಲೇ ಇದೆ. ಇವರದ್ದು ಸಾಂಸ್ಕೃತಿಕ, ಮತೀಯ ರಾಜಕಾರಣ ಮಾತ್ರವಾಗಿದೆ. ಕಾಂಗ್ರೆಸ್ ಮಾಡಿದ ಅಭಿವೃದ್ದಿಗಳನ್ನು ಮಣ್ಣು ಮುಕ್ಕಿದ್ದೇ ಇವರ ಸಾಧನೆ ಎಂದು ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥ ಹಾಗೂ ಬರಹಗಾರ ಎಂ ಜಿ ಹೆಗ್ಡೆ ಹೇಳಿದರು.


ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 8ನೇ ದಿನ ಮಾ 17ರಂದು ಶುಕ್ರವಾರ ಗುಡ್ಡೆಅಂಗಡಿ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಗೆ ಸಿದ್ದಾಂತದಲ್ಲೆ ಗೊಂದಲ ಇದೆ. ಬಿಜೆಪಿಯನ್ನು ಪ್ರಶ್ನಿಸಿದವರೆಲ್ಲ ಹಿಂದೂ ವಿರೋಧಿಗಳಾಗುತ್ತಾರೆ ಎಂದರು. 

 ಬಿಜೆಪಿ ವಿರುದ್ದ ಮಾತನಾಡುವವರಿಗೆ ಹಿಂದೂ ವಿರೋಧಿ ಪಟ್ಟ ಕಟ್ಟಿ ಬ್ಯಾಲೆಟ್ ಪೇಪರ್ ರಾಜಕಾರಣ ಮಾಡುವ ಬಿಜೆಪಿಗರು ಜನರಿಗೆ ಕೊಟ್ಟದ್ದು ಜೈಲು ಭಾಗ್ಯ, ಆಸ್ಪತ್ರೆ ಭಾಗ್ಯ ಹಾಗೂ ಸ್ಮಶಾನ ಭಾಗ್ಯ ಮಾತ್ರ. ಆದರೆ ಕಾಂಗ್ರೆಸ್ ಬಡಜನರಿಗೆ ಭಾಗ್ಯಗಳ ಸರಮಾಲೆ ನೀಡಿದ ಸಾಧನೆ ಮಾಡಿದೆ. ಇದಕ್ಕೆ ಇತಿಹಾಸದ ಜೊತೆಗೆ ಜೀವಂತ ಇರುವ ಜನರೂ ಸಾಕ್ಷಿಯಾಗಿದ್ದಾರೆ. 

ಭಾರತದ ಅಸ್ಮಿತೆಯೇ ಬಹುಮುಖೀ ಸಂಸ್ಕೃತಿ.ಇದನ್ನು ನೆಲೆ ನಿಲ್ಲಿಸಿದ್ದು ಕಾಂಗ್ರೆಸ್. ಮೂವತ್ತು ವರ್ಷ ಸಂಸದರಾಗಿ ಏನೂ ಮಾಡಲಾಗದವರು ಕಾಂಗ್ರೆಸ್ ಎಪ್ಪತ್ತು ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ ಎಂದರೆ ಇದು ವ್ಯಂಗ್ಯವಲ್ಲದೇ ಇನ್ನೇನು ಎಂದು ಪ್ರಶ್ನಿಸಿದ ಎಂ ಜಿ ಹೆಗ್ಡೆ ಹಿಂದುತ್ವಕ್ಕೆ ಬೇಸ್ ಇಲ್ಲ. ಕೇವಲ ಚುನಾವಣಾ ಗಿಮಿಕ್ ಮಾತ್ರವಾಗಿ ಹಿಂದುತ್ವ ಬಳಸಲ್ಪಡುತ್ತಿದೆ ಎಂದು ಕಿಡಿ ಕಾರಿದರು. 

ರೈಗಳ ಐದು ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಕಾರ್ಯಕ್ರಮಗಳ ಕೌಂಟರ್ ಆಗಿ ತಮ್ಮದೇನಾದರೂ ಕೋಟಿಯ ಅಭಿವೃದ್ದಿ ಇದ್ರೆ ಅದನ್ನು ಹೇಳಿ ರಾಜಕಾರಣ ಮಾಡಿ ಅದು ಬಿಟ್ಟು ಮತೀಯವಾದದ ರಾಜಕಾರಣಕ್ಕೆ ಇನ್ನು ಉಳಿಗಾಲವಿಲ್ಲ. ಭಾವನಾತ್ಮಕ ಭಾಷಣಗಳಿಂದ ಏನೂ ಆಗುವುದಿಲ್ಲ. ನೀವೆಷ್ಟೇ ಹೀಯಾಳಿಸಿದರೂ ಕಾಂಗ್ರೆಸ್ ಯಾವತ್ತೂ ಮತೀಯ ರಾಜಕಾರಣ ಮಾಡೋದೇ ಇಲ್ಲ. ನಮ್ಮದೇನಿದ್ದರೂ ಬಹುತ್ವದ ರಾಜಕಾರಣ ಮಾತ್ರ. ಅಧಿಕಾರ ಬಂದರೂ ಸರಿ ಹೋದರೂ ಸರಿ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ, ನಕಾರಾತ್ಮಕ ಚಿಂತನೆಗಳಿಗೆ ಜನ ಮರುಳಾಗುವುದು ಜಾಸ್ತಿ. ಆದರೆ ಈ ಬಾರಿ ಜನ ಎಲ್ಲ ಅರ್ಥ ಮಾಡಿಕೊಂಡಿದ್ದಾರೆ. ಅಪಪ್ರಚಾರಕ್ಕೆ ಇನ್ನು ಮುಂದೆ ಜನ ಬೆಲೆ ನೀಡಲಾರರು. ಶವ ಸಂಸ್ಕಾರಕ್ಕೆ ಕೊಡುವ ಐದು ಸಾವಿರವನ್ನೂ ಕೊಡಲಾಗದ ದರಿದ್ರ ಸರಕಾರ ರಾಜ್ಯದಲ್ಲಿದೆ. ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ನನ್ನ ಕನಸು ನನ್ನ ಸೋಲಿನ ಬಳಿಕ ನೆನೆಗದಿಗೆ ಬಿದ್ದಿದೆ. ಇನ್ನೊಮ್ಮೆ ನನಗೆ ಅವಕಾಶ ನೀಡಿದರೆ ಗೆದ್ದ ತಕ್ಷಣ ಬಂಟ್ವಾಳ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಿಸುವ ಕಾರ್ಯ ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು. 

ಇದೇ ವೇಳೆ ಯುವ ಜೆಡಿಎಸ್ ಮುಖಂಡ ಜಿ ಎ ಅಮಾನುಲ್ಲಾ ಅವರು ಮಾಜಿ ಸಚಿವ ರಮಾನಾಥ ರೈ ಹಾಗೂ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಪಾಣೆಮಂಗಳೂರು ಪೇಟೆಯಿಂದ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಗುಡ್ಡೆಅಂಗಡಿಯಲ್ಲಿ ಜೆಸಿಬಿ ಬಳಸಿ ರಮಾನಾಥ ರೈ ಅವರಿಗೆ ಪುಷ್ಪಾರ್ಚನೆ ಮಾಡಿ ಅದ್ದೂರು ಸ್ವಾಗತ ನೀಡಲಾಯಿತು.

Leave a Comment