ಪುತ್ತೂರು: ಪುತ್ತೂರು ನಗರ ಸಭೆಗೆ ತೆರವಾದ ಎರಡು ಸ್ಥಾನಗಳಿಗೆ ಡಿ 27 ರಂದು ಉಪ ಚುನಾವಣೆ ನಿಗದಿಯಾಗಿದ್ದು ಕಾಂಗ್ರೇಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಚುನಾವಣಾ ಕಣದಲ್ಲಿದ್ದು ಮೂರೂ ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್ ನಿಂದ ವಾರ್ಡ್ ನಂ.1 ಕಬಕದಲ್ಲಿ ದಿನೇಶ್ ಶೇವಿರೆ,ವಾರ್ಡ್ ನಂ.11 ನೆಲ್ಲಿಕಟ್ಟೆಯಲ್ಲಿ ದಾಮೋದರ ಭಂಡಾರ್ಕರ್ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ನಂ.1 ಕ್ಕೆ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಅನ್ನಪೂರ್ಣ ಎಸ್.ಕೆ ರಾವ್ ಹಾಗೂ ವಾರ್ಡ್ ನಂ.11 ಕ್ಕೆ ಚಿಂತನ್ ಪಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದು ವಾರ್ಡ್ 1 ಕ್ಕೆ ಸುನೀತಾ ಹಾಗೂ ವಾರ್ಡ್ 11ಕ್ಕೆ ರಮೇಶ್ ರೈಯವರು ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಡಾ.ಸುರೇಶ್ ಪುತ್ತೂರಾಯ ಅವರು ಭಾಗವಹಿಸಿದ್ದು ತೀವ್ರ ಕುತೂಹಲ ಮೂಡಿಸಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ ಸಂದರ್ಭದಲ್ಲಿ ಅವರ ಜತೆಗೆ ಪ್ರಮುಖ ನಾಯಕರಾಗಿ
ಕಾಣಿಸಿಕೊಂಡಿದ್ದ ಸುರೇಶ್ ಪುತ್ತೂರಾಯ ಅವರು ದಿಢೀರ್ ಆಗಿ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿದ್ದಂತೆ ಪುತ್ತಿಲ ಪರಿವಾರದ ನಾಯಕರು ಮರಳಿ ಬಿಜೆಪಿ ಕಡೆ ಮುಖಮಾಡಿರುವುದು ಪುತ್ತಿಲ ಪರಿವಾರಕ್ಕೆ ಹಿನ್ನಡೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.














