ಬೆಳಗಾವಿ : ವಿಧಾನಸಭಾ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ನಿನ್ನೆ ಸರ್ಕಾರ ಐತಿಹಾಸಿಕ ವ್ಯಕ್ತಿಗಳ ಹೆಸರುಗಳನ್ನು ನೂತನ ವಿಮಾನ ನಿಲ್ದಾಣಕ್ಕೆ ನಾಮಕರಣಕ್ಕೆ ಶಿಫಾರಸ್ಸು ಮಾಡಲು ನಿರ್ಧಾರ ಮಾಡಲಾಗಿದ್ದು, ಕೇಂದ್ರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ.ವಿಮಾನ ನಿಲ್ದಾಣಗಳ ನಾಮಕರಣ ಕುರಿತು ಚರ್ಚೆ ಆಗುತ್ತಿದ್ದಂತೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಕೋಟಿ ಚೆನ್ನಯ್ಯ' ಅವರ ಹೆಸರು ಇಡುವ ಕುರಿತು ನಿರ್ಧಾರ ಪ್ರಕಟಿಸಬೇಕು ಎಂದು ಮನವಿ ಮಾಡಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ 'ಅಬ್ಬಕ್ಕನ' ಹೆಸರು ಇಡಬೇಕೆಂಬ ಒತ್ತಾಯವು ಇರುವ ಕಾರಣ ಈ ಕುರಿತು ಸೂಕ್ತ ಚರ್ಚೆ ನಡೆಸಿ ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭಾಧ್ಯಕ್ಷರು ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಿ ಎಂದು ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದ್ದಾರೆ.
ಬಿಜೆಪಿ ನಾಯಕರು ಮುಸ್ಲಿಂ ರಾಷ್ಟ್ರೀಯ ನಾಯಕರನ್ನ ವಿರೋಧಿಸಿಕೊಂಡು ಬಂದಿದ್ದಾರೆ. ಟಿಪ್ಪು ಒಬ್ಬ ರಾಷ್ಟ್ರೀಯ ಪ್ರೇಮಿ. ಮೊದಲ ಸ್ವಾತಂತ್ರ್ಯ ಹೋರಾಟಗಾರರು. ಮೈಸೂರು ಆಂಗ್ಲೋ ಮೂರು ಯುದ್ದ ಮಾಡಿದವರು. ತಮ್ಮ ಮಗನನ್ನೇ ಒತ್ತೆ ಇಟ್ಟ ಇತಿಹಾಸವಿದೆ. ಆದ್ರೆ ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಯಾರು ಬ್ರಿಟಿಷರಿಗೆ ಸರೆಂಡರ್ ಆಗಿದ್ದರೋ, ಯಾರು ಬ್ರಿಟಿಷ್ ರಿಂದ ಪಿಂಚಣಿ ಪಡೆಯುತ್ತಿದ್ದಾರೋ ಅವರನ್ನ ಬಿಜೆಪಿ ರಾಷ್ಟ್ರ ಪ್ರೇಮಿ ಎಂದು ಬಿಂಬಿಸಲು ಹೊರಟಿದೆ. ಬಿಜೆಪಿಯವರಿಗೆ ಹಿಂದು- ಮುಸ್ಲಿಂ ಅನ್ನೋ ಅಜೆಂಡಾ ಬಿಟ್ಟು ಬೇರೆ ಏನೂ ಇಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಲ್ಲ, ಇತಿಹಾಸ ಒಪ್ಪಿಕೊಳ್ಳೋದಿಲ್ಲ. ಹೀಗಾಗಿ ಅವರು ಆಕ್ಷೇಪ ವ್ಯಕ್ತಪಡಿಸೋದು ಸಹಜ. ಆದ್ರೆ ನಾವು ಒಬ್ಬ ರಾಷ್ಟ ಪ್ರೇಮಿ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟವರು ಎಂದು ಹೇಳಿದರು.
ಸಾಂಬರ್ ಪದಾರ್ಥಗಳನ್ನ ಎಕ್ಸಪೋರ್ಟ್ ಮಾಡಿದ್ದು,
ರೇಷ್ಮೆ ವ್ಯಾಪಾರ ಬೆಳೆಸಿದ್ದು ಸೇರಿದಂತೆ ಹಲವು ಕೊಡುಗೆಗಳಿವೆ ಎಂದ ಶಾಸಕ ಪ್ರಸಾದ್ ಅಬ್ಬಯ್ಯ, ಇದರಿಂದ ನಾವು ಮೈಸೂರಿಗೆ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಪ್ರಸ್ತಾಪಿಸಿದ್ದೇನೆ. ಮುಂದೆ ಸಿಎಂ ಜೊತೆಯೂ ಇದರ ಬಗ್ಗೆ ಚರ್ಚೆ ಮಾಡ್ತೀನಿ. ಜೊತೆಗೆ ಟಿಪ್ಪು ಜಯಂತಿ ಖಂಡಿತವಾಗಿ ಆಚರಣೆ ಮಾಡಬೇಕು ಎಂದು ಹೇಳಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್, ಚರಿತ್ರೆ ಬಗ್ಗೆ ಬಹಳಷ್ಟು ಅವಲೋಕನ ಮಾಡಬೇಕು. ನಾವು ಚಿಕ್ಕ ಮಕ್ಕಳಿಂದ ಟಿಪ್ಪು ಬಗ್ಗೆ ಓದಿದ್ದೇವೆ. ಮೈಸೂರು ಪ್ರಾಂತ್ಯ ಉಳಿಸಲು ಟಿಪ್ಪು ಸುಲ್ತಾನ ಹೋರಾಟದ ಬಗ್ಗೆ ಗೊತ್ತಿದೆ. ಶೃಂಗೇರಿ ಮಠ ಉಳಿಯಬೇಕಾದರೆ ಅವರ ಹೋರಾಟಕ್ಕೆ ಚರಿತ್ರೆ ಇದೆ. ತಿರುಪತಿ, ಶೃಂಗೇರಿಯಲ್ಲಿ ಮೊದಲ ಪೂಜೆ ಟಿಪ್ಪು ಸುಲ್ತಾನ್ ಹೆಸರಲ್ಲಿ ಆಗುತ್ತೆ, ಶ್ರೀರಂಗಪಟ್ಟಣ ದಲ್ಲಿ ರಂಗನಾಥ ದೇವಸ್ಥಾನ ಹಾಗೇ ಇದೆ ಎಂದು ಹೇಳಿದರು.
ಅಬ್ಬಯ್ಯ ಅವರ ಆಗ್ರಹಕ್ಕೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ತೀವ್ರವಾಗಿ ವಿರೋಧಿಸಿದರು. ಇದರಿಂದ ಸದನದಲ್ಲಿ ಗದ್ದಲ ಉಂಟಾಯಿತು.














