Coastal Bulletin

ಮಂಗಳೂರು:ಫೇಸ್‌ಬುಕ್‌ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಅವಹೇಳನ ಪ್ರಕರಣದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ ಕೋಟೇಶ್ವರದ ಬಿಜಾಡಿ ನಿವಾಸಿ ಹರೀಶ್ ಬಂಗೇರ ಎಸ್. ಅವರು ಜೈಲಿನಿಂದ ಬಿಡುಗಡೆಯಾಗಿ ಶೀಘ್ರದಲ್ಲೇ ತಾಯ್ತಾಡಿಗೆ ಮರಳಲಿದ್ದಾರೆ.

ಈ ಬಗ್ಗೆ ಮಂಗಳೂರು ಅಸೋಷಿಯೇಷನ್ ಸೌದಿ ಅರೇಬಿಯಾದ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಮಾಹಿತಿ ನೀಡಿ 'ಶೀಘ್ರದಲ್ಲೇ ಹರೀಶ್ ತಾಯ್ತಾಡಿಗೆ ಮರಳಲಿದ್ದಾರೆ. ವಿಮಾನ ಪ್ರಯಾಣದ ವೆಚ್ಚವನ್ನು ಕೂಡಾ ಮಂಗಳೂರು ಅಷೋಷಿಯೇಷನ್ ನ ಪರವಾಗಿ ಜೈಲು ಅಧಿಕಾರಿಗಳಿಗೆ ನೀಡಲಾಗಿದೆ. ಇವರ ಬಿಡುಗಡೆಯ ಎಲ್ಲಾ ದಾಖಲೆ ಪತ್ರ ಪೂರ್ಣವಾಗಿದೆ'ಎಂದರು.

2019 ರ ಡಿಸೆಂಬರ್ನಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೀಡಿಯೋವೊಂದನ್ನು ಹರೀಶ್ ಬಂಗೇರ ಎಸ್. ಎನ್ನುವ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಕೂಡಲೇ ಅಲ್ಲಿನ ಯುವಕರು ಹರೀಶ್ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಘಟನೆಯ ಬಗ್ಗೆ ಹರೀಶ್ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. 2019 ರ ಡಿ.19 ರಾತ್ರಿ ತನ್ನ ಫೇಸ್ ಬುಕ್ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಿದ್ದರು. ಈ ಎಲ್ಲ ವಿಚಾರಗಳನ್ನು ಹರೀಶ್ ಬಂಗೇರ ಅವರು ತಮ್ಮ ಪತ್ನಿಯಲ್ಲಿ ಹಂಚಿಕೊಂಡಿದ್ದರು.

ಆದರೆ 2019 ಡಿ. 20ರಂದು ಮತ್ತೆ

ಯಾರೋ ಕಿಡಿಗೇಡಿಗಳು ಹರೀಶ್ ಬಂಗೇರ ಎನ್ನುವ ನಕಲಿ ಫೇಸ್ ಬುಕ್ ಖಾತೆಯಿಂದ ಮೆಕ್ಕಾ ಕುರಿತು, ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿ ಅಪ್‌ಲೋಡ್ ಮಾಡಿದ್ದರು. ಇದು ನಿಂದನಾತ್ಮಕ ಹಾಗೂ ವಿವಾದಾತ್ಮಕವಾಗಿದ್ದು ಸೌದಿಯಾದ್ಯಂತ ಭಾರಿ ವೈರಲ್ ಆಗಿತ್ತು. ಆ ಬಳಿಕ ಅವರನ್ನು ಸೌದಿ ಪೊಲೀಸರು ವಶಕ್ಕೆ ಪಡೆದಿದ್ದರು.

ಇನ್ನು ಇತ್ತ ಪತಿ ಬಂಧನದಿಂದ ಕಂಗೆಟ್ಟ ಹರೀಶ್ ಬಂಗೇರ ಎಸ್. ಅವರ ಪತ್ನಿ ಸುಮನಾ ಹರೀಶ್ ಫೇಕ್ ಅಕೌಂಟ್ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಲಾಗಿರುವ ವಿಚಾರದ ಕುರಿತು ಉಡುಪಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ದೂರಿನ ವರದಿಯನ್ನು ಸೌದಿ ಪೊಲೀಸರಿಗೆ ಉಡುಪಿ ಪೊಲೀಸರು ರವಾನಿಸಿದ್ದರು.

ನಕಲಿ ಖಾತೆ ಕ್ರಿಯೇಟ್ ಆಗಿರುವ ಬಗ್ಗೆ ಉಡುಪಿ ಸೆನ್ ಪೊಲೀಸರು ತನಿಖೆ ನಡೆಸಿದಾಗ ಮೂಡುಬಿದಿರೆಯ ಸಹೋದರರಾದ ಅಬ್ದುಲ್ ಹುಯೇಸ್ ಹಾಗೂ ಅಬ್ದುಲ್ ತುವೇಸ್ ಈ ಕೃತ್ಯದ ಹಿಂದಿರುವುದು ಬೆಳಕಿಗೆ ಬಂದಿತ್ತು.2020 ರ ಜೂನ್ ತಿಂಗಳಲ್ಲಿ ಸಹೋದರರಿಬ್ಬರನ್ನು ಬಂಧಿಸಿ ಅಕ್ಟೋಬರ್ ನಲ್ಲಿ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

Leave a Comment