Coastal Bulletin

ಬಂಟ್ವಾಳ: ದೇಶದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವನಮಟ್ಟ ಸುಧಾರಣೆ ಜೊತೆಗೆ ಸ್ವಾವಲಂಬಿ ಜೀವನ ನಡೆಸುವ ಮೂಲಕ ಸಾಮಾಜಿಕ ಪರಿವರ್ತನೆಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉದ್ಧೇಶ ಸ್ವಸಹಾಯ ಗುಂಪುಗಳ ಮೂಲಕ ಸಾಕಾರಗೊಳ್ಳುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಇಲ್ಲಿನ ಪುಂಜಾಲಕಟ್ಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಗ್ಗ ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಮತ್ತು ಸಾಧನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಸುಮಾರು 48 ಲಕ್ಷ ಮಂದಿ ಸದಸ್ಯರು ಸ್ವಸಹಾಯ ಗುಂಪುಗಳಲ್ಲಿ ತೊಡಗಿಸಿಕೊಂಡಿದ್ದು, ಸ್ವಯಂ ಉದ್ಯೋಗ ಮತ್ತು ಸಾಲದ ಹಣ ಮರು ಪಾವತಿಸಿ ಗಮನ ಸೆಳೆಯುತ್ತಿದ್ದಾರೆ. ಧರ್ಮಸ್ಥಳದಲ್ಲಿ  ಪ್ರತಿದಿನ ಅನ್ನದಾನ, ವಿದ್ಯಾದಾನ, ಔಷಧ ದಾನ, ಅಭಯದಾನ ನಿರಂತರವಾಗಿ ನಡೆಯುತ್ತಿದೆ ಎಂದರು. 

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಯೋಜನೆಗಳು ಅರ್ಹ ಫಲಾನುಭವಿಗಳ ಆಯ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆಗಬೇಕು ಎಂದರು.

 ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿಯವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶದಾದ್ಯಂತ ವಿಸ್ತಾರಗೊಳ್ಳಲಿ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸರ್ಕಾರದ ಸ್ತ್ರೀ ಶಕ್ತಿ ಗುಂಪು ರಚನೆಗೆ ಪರಿಸರ ಪ್ರೇಮಿ ಧರ್ಮಸ್ಥಳ ಯೋಜನೆ ಪ್ರೇರಣೆ ಎಂದರು.

ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಲ್. ಎಚ್. ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ

ಕೊರೋನ ವೈರಸ್ ಗೆ ಬಲಿಯಾದ 39 ಸಾವಿರ ಮಂದಿ ಸದಸ್ಯರ ಕುಟುಂಬಕ್ಕೆ ರೂ 220 ಕೋಟಿ ಜೀವ ವಿಮೆ ನೆರವು ನೀಡಲಾಗಿದೆ. ಕಳೆದ ವರ್ಷ 700 ಎಕರೆ ಸಕಾರಿ ಜಮೀನಿನಲ್ಲಿ ಹಣ್ಣಿನ ಗಿಡ ನೆಡಲಾಗಿದೆ ಎಂದರು. 

ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಹರ್ಷಿಣಿ ಪುಷ್ಪಾನಂದ, ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ಶುಭ ಹಾರೈಸಿದರು.

ನಿರ್ಗಮಿತ ವಲಯಾಧ್ಯಕ್ಷ ಸುಂದರ ಪೂಜಾರಿ, ನೂತನ ಅಧ್ಯಕ್ಷ ಚಿದಾನಂದ ರೈ ಕಕ್ಯ, ಸುಂದರ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು. 

 ಎಸ್ ಬಿ ಐ ಬ್ಯಾಂಕ್ ಜನರಲ್ ಮ್ಯಾನೇಜರ್  ರಾಜೇಶ್ ಗುಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಜನಜಾಗೃತಿ ವೇದಿಕೆ ಅಧ್ಯಕ್ಷ ತಾಲ್ಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ, ಸ್ಥಾಪಕಾಧ್ಯಕ್ಷ ಎ.ಸಿ.ಭಂಡಾರಿ, ವಗ್ಗ ವಲಯಾಧ್ಯಕ್ಷ ಟಿ.ಹರೀಂದ್ರ ಪೈ,  ಪ್ರಮುಖರಾದ ಬಾಲಕೃಷ್ಣ ಆಳ್ವ,  ಮಾಧವ ವಳವೂರು, ಮಾಧವ ಪೂಜಾರಿ, ಮಾಣಿಕ್ಯರಾಜ್ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಎನ್.ಪ್ರಕಾಶ್ ಕಾರಂತ್ ಇದ್ದರು.

ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿ, ಯೋಜನಾಧಿಕಾರಿ ಜಯಾನಂದ ಪಿ. ವಂದಿಸಿದರು. ಮೇಲ್ವಿಚಾರಕಿ ಅಶ್ವಿನಿ ಮತ್ತು ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Comment