ಬಂಟ್ವಾಳ: ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಈದಿನದಿಂನದಲೇ ಅಗ್ನಿಪರೀಕ್ಷೆ ಆರಂಭವಾಗುತ್ತದೆ. ಮತ್ತೆ ಕುಡಿತದ ದಾಸರಾಗುವಂತೆ ಆಹ್ವಾನಿಸುತ್ತಾರೆ, ಅವಮಾನಿಸುತ್ತಾರೆ. ಆದರೆ ಎಂತಹ ಪರಿಸ್ಥಿತಿಯಲ್ಲೂ ಮತ್ತೆ ಕುಡಿತದತ್ತ ಆಕರ್ಷಿತರಾಗದೆ , ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳಬೇಕು, ಆಗ ಜೀವನ ಸುಖಮಯವಾಗಿರಲು ಸಾಧ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಬೆಳ್ತಂಗಡಿ ಇದರ ವಿಸ್ತರಣ ಕಾರ್ಯಕ್ರಮದ ಅಂಗವಾಗಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಎಂಟು ದಿನಗಳ ಕಾಲ ನಡೆದ ೧೫೪೦ನೇ ಮಧ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.
ಶಿಬಿರಾರ್ಥಿಗಳ ಮನೆಮಂದಿಗೆ ಸಂತೋಷವಾಗಿ, ಶಿಬಿರಾರ್ಥಿಯ ಬಗ್ಗೆ ಧೈರ್ಯ ಬಂದಿದ್ದರೆ ಶಿಬಿರ ಸಾರ್ಥಕವಾದಂತೆ ಎಂದು ಅವರು ತಿಳಿಸಿದರು. ಈ ಹಿಂದಿನ ಜೀವನದ ಕತೆಯನ್ನು ಬಿಟ್ಟು ಇಂದಿನಿಂದ ಜೀವನದಲ್ಲಿ ದೃಢ ಮನಸ್ಸಿನಿಂದ ಕುಡಿಯುವುದಿಲ್ಲ ಎನ್ನುವ ನಿರ್ಧಾರ ಕೈಗೊಂಡಾಗ ಆ ಮನೆಯಲ್ಲಿ ನಗು ಶಾಶ್ವತವಾಗಿರುತ್ತದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಾತನಾಡಿ ದೂರದೃಷ್ಟಿತ್ವ ಇಟ್ಟುಕೊಂಡು ಮಾಡಿದ ಪ್ರತೀ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಿದೆ ಎಂದರು. ಇಂದಿನ ದಿನಗಳಲ್ಲಿ ಜನರಿಗೆ
ಸಾಕಷ್ಟು ಉದ್ಯೋಗವಕಾಶವಿದೆ, ಸಾಕಷ್ಟು ಆದಾಯವೂ ಇದೆ. ಆದಾಗ್ಯೂ ಒಬ್ಬ ಬಡವ ಇದ್ದಾನೆ ಎಂದಾದರೆ ಅದು ಆತನ ದುಶ್ಚಟದಿಂದಾಗಿ ಮಾತ್ರ ಸಾಧ್ಯ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷ ರೊನಾಲ್ಡ್ ಡಿಸೋಜಾ ಅವರಿಗೆ ಜವಬ್ದಾರಿ ಹಸ್ತಾಂತರಿಸಲಾಯಿತು.
೧೫೪೦ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಡಾ. ವಸಂತ ಬಾಳಿಗ, ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು. ಸಮಿತಿಯ ಗೌರವ ಸಲಹೆಗಾರ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಮನ್ಮಥ ರಾಜ್ ಜೈನ್ ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಇದರ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಕುಟುಂಬ ದಿನ ನಡೆಸಿಕೊಟ್ಟರು.
ಜಿಲ್ಲಾ ನಿರ್ದೇಶಕ, ವ್ಯವಸ್ಥಾಪನ ಸಮಿತಿಯ ಪ್ರಧಾನ ಸಂಚಾಲಕ ಸತೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾಧಿಕಾರಿ, ಶಿಬಿರದ ಸಂಚಾಲಕ ಜಯಾನಂದ ಪಿ., ವಂದಿಸಿದರು, ಉಡುಪಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ತಿಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಮೇಲ್ವಿಚಾರಕರಾದ ಅಮಿತಾ, ಕೇಶವ, ವೇದಾವತಿ, ಮಮತಾ ಸಹಕರಿಸಿದರು. ಸೇವಾಪ್ರತಿನಿಧಿಗಳು, ಪ್ರಗತಿಬಂಧು ಸ್ವಸಹಾಯ ಗುಂಪಿನ ಸದಸ್ಯರು, ನವಜೀವನ ಸಮಿತಿ ಸದಸದ್ಯರು, ಶಿಬಿರಾರ್ಥಿಗಳ ಕುಟುಂಬ ಬಂಧುಗಳು ಉಪಸ್ಥಿತರಿದ್ದರು.
















