ತುಂಬೆ: ನೂತನ ನಿರ್ಮಾಣದ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ.ಶಿವಲಿಂಗ ಬಾಲಾಲಯದಿಂದ ಉದ್ವಾಸನೆ,ಕಟೀಲು ಮೇಳದವರಿಂದ ಯಕ್ಷಗಾನ.

Coastal Bulletin
ತುಂಬೆ: ನೂತನ ನಿರ್ಮಾಣದ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ.ಶಿವಲಿಂಗ ಬಾಲಾಲಯದಿಂದ ಉದ್ವಾಸನೆ,ಕಟೀಲು ಮೇಳದವರಿಂದ ಯಕ್ಷಗಾನ.

ಬಂಟ್ವಾಳ, ಫೆ. 13: ತಾಲೂಕಿನ ತುಂಬೆ ಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ಆರಂಭಗೊಂಡಿದ್ದು, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭತಂತ್ರಿಗಳನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ಶಿವಲಿಂಗವನ್ನು ಬಾಲಾಲಯದಿಂದ ಉದ್ವಾಸನೆ ಮಾಡಿ ಮೂಲಾಲಯದಲ್ಲಿ ನ್ಯಾಸ ಮಾಡಲಾಯಿತು.

ವೈದಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ ಗಣಪತಿ ಹೋಮ, ಪ್ರಾರ್ಥನೆ, ಅನುಜ್ಞಾಕಲಶಪೂಜೆ, ಅನುಜ್ಞಾಕಲಶಾಭಿಷೇಕ, ಅನುಜ್ಞಾಪ್ರಾರ್ಥನೆ, ಧ್ಯಾನ, ಸಂಕೋಚ, ಸಂಜೆ ಪುಣ್ಯಾಹ, ಪ್ರಾಸಾದ ಶುದ್ದಿ, ವಾಸ್ತು ರಕ್ಷೆಘ್ನ ಹೋಮ, ವಾಸ್ತು ಬಲಿ, ಅಂಕುರಾರ್ಪಣೆ, ಕಟೀಲು ಮೇಳದವರಿಂದ ಯಕ್ಷಗಾನ ಪ್ರದರ್ಶನಗೊಂಡಿತು. ಸಾವಿರಾರು ಭಕ್ತರು ಮಧ್ಯಾಹ್ನ - ರಾತ್ರಿ ಅನ್ನಪ್ರಸಾದ ಸ್ವೀಕರಿಸಿದರು.

ಜೀರ್ಣೋದ್ಧಾರ-ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ ತುಂಬೆಗುತ್ತು, ಜತೆ ಕಾರ್ಯದರ್ಶಿ ಉಮೇಶ್ ಸುವರ್ಣ ತುಂಬೆ, ಕಾರ್ಯದರ್ಶಿ ಜೀವನ್ ಆಳ್ವ ತುಂಬಿಗುತ್ತು, ಸಮಿತಿ ಪದಾಧಿಕಾರಿಗಳು, ಸೇವಾ ಸಮಿತಿ ಅಧ್ಯಕ್ಷ ಅರುಣ್ ಆಳ್ವ ತುಂಬೆಗುತ್ತು, ಆನುವಂಶಿಕ ಆಡಳಿತ ಮೊಕ್ತಸರ ಬಾಲಕೃಷ್ಣ ಶೆಟ್ಟಿ ತುಂಬೆಗುತ್ತು ಮೊದಲಾದವರಿದ್ದರು.

ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ವೈದಿಕ, ಸಾಂಸ್ಕೃತಿಕ, ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದ್ದು,ವಿವಿಧ ಕ್ಷೇತ್ರಗಳ ಸಂತರು, ಜನಪ್ರತಿನಿಧಿಗಳು, ಸಾಮಾಜಿಕ-ಉದ್ಯಮ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಫೆ. 18ರಂದು ಬೆಳಗ್ಗೆ 8.30ರಿಂದ 9.03ರ ಮೀನ ಲಗ್ನದಲ್ಲಿ ಶ್ರೀ ಮಹಾಲಿಂಗೇಶ್ವರ, ಶ್ರೀ ಗಣಪತಿ, ಶ್ರೀ ವೆಂಕಟರಮಣ ದೇವರ ಪ್ರಾಣ ಪ್ರತಿಷ್ಠೆ ಜೀವ ಕಲಶಾಭಿಷೇಕ, ಅಷ್ಟಬಂಧ ಲೇಪನ, ಪ್ರತಿಷ್ಠಾ ಬಲಿ ನೆರವೇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಫೆ.

14ರಂದು ಮಧ್ಯಾಹ್ನ ತುಂಬೆ ದಿವಿಶ್ ಪ್ರಿ-ಪ್ರೈಮರಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ವಿದುಷಿ ಯಜ್ಞರೈ ಅವರಿಂದ ಭರತನಾಟ್ಯ, ಸಂಜೆ ಪವಿತ್ರಾ ಮಯ್ಯ ಬಳಗದಿಂದ ಸಂಗೀತ, ರಾತ್ರಿ 8ಕ್ಕೆ ಆಳ್ವಾಸ್ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ. ಫೆ. 15ರಂದು ಮಧ್ಯಾಹ್ನ 3ಕ್ಕೆ ಪಟ್ಲ ಸತೀಶ್ ಶೆಟ್ಟಿ ಬಳಗದಿಂದ ಬೇಡರ ಕಣ್ಣಪ್ಪ ಯಕ್ಷಗಾನ, ರಾತ್ರಿ 8ಕ್ಕೆ ಕಲಾಮಂದಿರ್ ಬೆಳ್ಳಾರೆ ಇವರಿಂದ ನೃತ್ಯ ಸಂಭ್ರಮ ನಡೆಯಲಿದೆ.

ಫೆ. 16ರಂದು ಮಧ್ಯಾಹ್ನ 3ಕ್ಕೆ ಪುತ್ತೂರು ಶ್ರೀದೇವಿ ನೃತ್ಯಾರಾಧಾನಾ ಕಲಾಕೇಂದ್ರದವರಿಂದ ನೃತ್ಯರಂಜಿನಿ, ರಾತ್ರಿ 8ಕ್ಕೆ ಸಾಯಿ ಶಕ್ತಿ ಕಲಾ ಬಳಗದ ಮಂಗಳೂರು ಇವರಿಂದ ಬೊಳ್ಳಿ ಮಲೆತ ಶಿವಶಕ್ತಿಲು ತುಳು ಪೌರಣಿಕ ನಾಟಕ, ಫೆ. 17ರಂದು ಮಧ್ಯಾಹ್ನ 3ಕ್ಕೆಜಗದೀಶ್ ಆಚಾರ್ಯ ಬಳಗದಿಂದ ಭಕ್ತಿ ಗೀತೆ ರಸಮಂಜರಿ, ರಾತ್ರಿ 8ಕ್ಕೆ ಕಂಡನಿ-ಬುಡೆದಿ ತುಳು ನಾಟಕ, ಫೆ. 18ರಂದು ಮಧ್ಯಾಹ್ನ 3ಕ್ಕೆ ಜ್ಯೋತಿಗುಡ್ಡೆ ನೃತ್ಯಾಂಜಲಿ ಭರತನಾಟ್ಯ ಕೇಂದ್ರದವರಿಂದ ನೃತ್ಯ ವೈವಿಧ್ಯ, ರಾತ್ರಿ 8ಕ್ಕೆ ಅಜಯ್ ವಾರಿಯರ್ ಬಳಗದಿಂದ ಸಂಗೀತ ರಸಮಂಜರಿ ನಡೆಯಲಿದೆ. ಫೆ. 19ರಿಂದ 23ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

Leave a Comment