ಸತತ 15ನೇ ವರ್ಷಕ್ಕೆ ಬಣ್ಣ ಹಾಕಲಿದ್ದಾರೆ ಹೆಣ್ಣು ಹುಲಿ..! ಬ್ಯಾಕ್ ಟೈಗರ್ ಪೂಜಾ ಮೈರಾನ್‌ಪಾದೆ. 42ನೇ ವರ್ಷದ ಕಲಾಸೇವೆಯ ತಯಾರಿಯಲ್ಲಿ ಗೆಳೆಯರ ಬಳಗ ಮೈರಾನ್ಪಾದೆ.

ಯಾದವ ಕುಲಾಲ್ ಬಿ ಸಿ ರೋಡ್.
ಸತತ 15ನೇ ವರ್ಷಕ್ಕೆ ಬಣ್ಣ ಹಾಕಲಿದ್ದಾರೆ ಹೆಣ್ಣು ಹುಲಿ..! ಬ್ಯಾಕ್ ಟೈಗರ್ ಪೂಜಾ ಮೈರಾನ್‌ಪಾದೆ. 42ನೇ ವರ್ಷದ ಕಲಾಸೇವೆಯ ತಯಾರಿಯಲ್ಲಿ ಗೆಳೆಯರ ಬಳಗ ಮೈರಾನ್ಪಾದೆ.

ಹುಲಿವೇಷದ ಅಬ್ಬರಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಹೆಸರುವಾಸಿ. ಉಭಯ ಜಿಲ್ಲೆಗಳಲ್ಲಿ ಯಾವುದೇ ಹಬ್ಬ ಅಥವಾ ಜಾತ್ರೆಯ ಸಂದರ್ಭ ಮೆರವಣಿಗೆ ಆಯೋಜನೆಯಾಗಿದ್ದರೆ ಅದು ಕಳೆಗಟ್ಟುವುದು ಹುಲಿವೇಷದಿಂದಲೇ. ಜನರಿಗೆ ಮನರಂಜನೆ ನೀಡುವ ಸಲುವಾಗಿಯೇ ಮತ್ತು ಕೆಲವರು ತಮ್ಮ ಹೊಟ್ಟೆಪಾಡಿಗಾಗಿಯೂ ಹುಲಿವೇಷವನ್ನು ಮಾಡುವ ಕಲಾವಿದರೂ ಇದ್ದಾರೆ. ಬಿಸಿಲು ಮಳೆ ಚಳಿಯಲ್ಲಿ ಬರಿಮೈಯಲ್ಲಿ ನಿಂತು ಸಹಿಸಿಕೊಂಡು ಕುಣಿದು ಕುಪ್ಪಳಿಸುವ ಶಕ್ತಿಯುಳ್ಳ ಯಾವ ಜನಾಂಗದ ವ್ಯಕ್ತಿಯಾದರೂ ಹುಲಿವೇಷ ಹಾಕಬಹುದು. ಕೆಲವರು ಹರಕೆ ಹೊತ್ತವರೂ ನವರಾತ್ರಿ ಸಮಯದಲ್ಲಿ ಮಾತ್ರ ವೇಷ ಧರಿಸುತ್ತಾರೆ.

ತನ್ನ ಹಿರಿಯರು ಜನಪದ ಕಲೆಯಾಗಿ ಹುಲಿವೇಷವನ್ನು ಹಾಕಿ ಕುಣಿಯುವದನ್ನು ಬೆರಗುಗಣ್ಣಿನಿಂದ ನೋಡುತ್ತಾ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಅಪ್ಪನಿಂದಲೇ ಅದನ್ನು ಕಲಿತು ಒಂದನೇ ತರಗತಿಯಿಂದಲೇ ಮರಿಹುಲಿಯಾಗಿ ಕುಣಿದು ಜನರ ಮನಸ್ಸನ್ನು ಗೆದ್ದು ಸತತ ೧೪ ವರ್ಷಗಳಿಂದ ವೇಷ ಮಾಡುತ್ತಾ ಪ್ರಸ್ತುತ ೧೫ನೇ ವರ್ಷದಲ್ಲಿ ವೇಷ ಮಾಡಲು ಸಿದ್ಧರಾಗುತ್ತಿರುವವರು ಬಂಟ್ವಾಳ ತಾಲೂಕಿನ ಬಿ.ಮೂಡ ಮೈರಾನ್‌ಪಾದೆಯ ಪೂಜಾ. ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಹುಲಿವೇಷ ಹಾಕುವ ಹೆಣ್ಣು ಹುಡುಗಿ ಜಿಲ್ಲೆಯಲ್ಲಿ ಇವಳೊಬ್ಬಳೇ ಆಗಿರಬಹುದು.


೧ನೇ ತರಗತಿಯಿಂದಲೇ ಹುಲಿಬಣ್ಣ ಹಚ್ಚಿದ ಪೂಜಾ : ಮೈರಾನ್‌ಪಾದೆಯಲ್ಲಿ ಬಿ. ರತ್ನಾಕರ ಸಾಲ್ಯಾನ್‌ರವರು ಗೆಳೆಯರ ಬಳಗ ಮೈರಾನ್‌ಪಾದೆ ಎಂಬ ಹುಲಿವೇಷದ ತಂಡವನ್ನು ಕಟ್ಟಿ ಬೆಳೆಸಿದ್ದು, ಇವರು ಮಗಳು ಪೂಜಾ ತಂದೆಯ ಜೊತೆ ಒಂದನೇ ತರಗತಿಯಿಂದಲೇ ಬಣ್ಣ ಹಾಕಲು ಅಭ್ಯಾಸ ಮಾಡಿದ್ದಾರೆ. ತಂದೆಯ ಜೊತೆ ಹುಲಿ ವೇಷದ ಹೆಜ್ಜೆಗಾರಿಕೆ, ತಮಟೆಗೆ ತಕ್ಕಂತೆ ಕುಣಿತ, ತಂದೆ ಹುಲಿ ಜೊತೆ ಕುಣಿತ, ಇಬ್ಬರು ಅಥವಾ ಮೂರು ಜನ ಹಿಡಿದು ಜಂಪಿಂಗ್, ಹೀಗೆ ಬಗೆ ಬಗೆಯಲ್ಲಿ ಕುಣಿದು ತಮ್ಮ ಅಭಿಮಾನಿ ಬಳಗಕ್ಕೆ ಮನೋರಂಜನೆಯನ್ನು ನೀಡುತ್ತಿದ್ದಾರೆ.

ಪೂಜಾ ಬ್ಲಾಕ್ ಟೈಗರ್ ಆಗಿ ಪ್ರಸಿದ್ಧ : ಪೂಜಾರವರು ಹುಲಿವೇಷಧಾರಿಯಾಗಿ ಗೋವಾ, ಬೆಂಗಳೂರು, ತುಮಕೂರು, ಶ್ರೀ ರಾಜರಾಜೇಶ್ವರಿ ಕ್ಷೇತ್ರ ಪೊಳಲಿ, ಮೆರ್ಲಪದವು, ಬೆದ್ರ ಫ್ರೆಂಡ್ಸ್, ಮಾರಿಗುಡಿ

ಫ್ರೆಂಡ್ಸ್ ಬೆದ್ರ ಕೂಳೂರು, ಪಾಂಡೇಶ್ವರ, ಮಂಕಿಸ್ಟ್ಯಾಂಡ್ (ಮಂಗಳೂರು), ಕಕ್ಕೆಪದವು, ಪುತ್ತೂರು ಮುಂತಾದ ಕಡೆ ಪ್ರದರ್ಶನವನ್ನು ನೀಡಿದ್ದಾರೆ. ೨೦೧೯ರಲ್ಲಿ ಬಿರುವೆರ್ ಕುಡ್ಲ ವತಿಯಿಂದ ನಡೆದ ಪಿಲಿಗೊಬ್ಬು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನದ ಶ್ಲಾಘನೆಗೆ ಪಾತ್ರರಾಗಿದ್ದಾರೆ. ತನ್ನ ೧೭ನೇ ವರ್ಷದಿಂದ ಇಲ್ಲಿಯವರೆಗೆ ಬ್ಲ್ಯಾಕ್ ಟೈಗರ್ ಹುಲಿವೇಷಧಾರಿಯಾಗಿ ಅದ್ಭುತ ಹುಲಿಕುಣಿತ ಪ್ರದರ್ಶನ ನೀಡುತ್ತಿದ್ದಾರೆ.

ದಿವಂಗತ ಮಾಂಕು ರವರು ಹಲವಾರು ವರ್ಷಗಳಿಂದ ಶ್ರೀ ತಿರುಮಲ ವೆಂಕಟರಮಣ ದೇವಾಲಯದಲ್ಲಿ ಶಾರ್ದುಲ ವೇಷ ಹಾಕಿ ತನ್ನ ಕಲಾ ಸೇವೆಯನ್ನು ನೀಡುತ್ತಾ ಬಂದು, ನಂತರ ಅವರ ದ್ವಿತೀಯ ಪುತ್ರ ರತ್ನಾಕರ ಸಾಲ್ಯಾನ್ ರವರು ತನ್ನ ತಂದೆಯಂತೆ ಚಿಕ್ಕ ವಯಸ್ಸಿನ್ನಲ್ಲಿ ಹುಲಿ ವೇಷ ದಾರಿಯಾಗಿ ತಂಡಕ್ಕೆ ಗೆಳೆಯರ ಬಳಗ ಹೆಸರು ನಾಮಕರಣ ಮಾಡಿ, ಕಲಾ ಸೇವೆಯನ್ನು ಶಾರದಾಂಬೆಗೆ ನೀಡುತ್ತಾ ಬಂದಿರುತ್ತಾರೆ. ಈ ಬಾರಿ ನವರಾತ್ರಿಗೆ ೪೨ನೇ ವರ್ಷ ಹುಲಿವೇಷವನ್ನು ಇಳಿಸಲು ತಯಾರಿ ನಡೆಸುತ್ತಿರುವ ಗೆಳೆಯರ ಬಳಗದ ವಿಶೇಷ ಆಕರ್ಷಣೆ ಈ ಹೆಣ್ಣು ಹುಲಿಯೇ.

************

ತಂದೆ ಹುಲಿವೇಷದಲ್ಲಿ ನಿಪುಣರಾಗಿದ್ದು, ಅವರ ಜೊತೆ ಚಿಕ್ಕಂದಿನಲ್ಲಿಯೇ ಹುಲಿವೇಷ ಹಾಕುತ್ತಿದ್ದೇನೆ. ಮನೆಯ ಪ್ರತೀ ಸದಸ್ಯರೂ ಹುಲಿವೇಷ ಹಾಕುತ್ತಾರೆ. ಹುಲಿವೇಷಕ್ಕೆ ಬೇಕಾಗುವ ಮುಖವಾಡ, ಬಣ್ಣಗಾರಿಕೆ, ತಾಸೆ ಎಲ್ಲವನ್ನೂ ತಂದೆ ತಯಾರಿಸುವ ಕಾರಣ ಅವುಗಳನ್ನು ನೋಡಿ ಅದೆಲ್ಲದರಲ್ಲಿಯೂ ನಾನೂ ಪರಿಣತಳಾಗಿದ್ದೇನೆ. ಒಟ್ಟಿನಲ್ಲಿ ಹುಲಿವೇಷ ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿದೆ.

- ಪೂಜಾ, ಮೈರಾನ್‌ಪಾದೆ, ಬಂಟ್ವಾಳ

Leave a Comment