ಬೆಂಜನಪದವು :ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯ ಮಟ್ಟದ 'ಆಕೃತಿ' ತಾಂತ್ರಿಕ, ಸಾಂಸ್ಕೃತಿಕ ಉತ್ಸವ 2026 ಉದ್ಘಾಟನೆ. ಕರಾವಳಿ ಕರ್ನಾಟಕವನ್ನು ಸಿಲಿಕಾನ್ ಹಬ್ ಆಗಿಸುವ ಕನಸು : ರೋಹಿತ್ ಭಟ್

Coastal Bulletin
ಬೆಂಜನಪದವು :ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯ ಮಟ್ಟದ 'ಆಕೃತಿ' ತಾಂತ್ರಿಕ, ಸಾಂಸ್ಕೃತಿಕ ಉತ್ಸವ 2026 ಉದ್ಘಾಟನೆ. ಕರಾವಳಿ ಕರ್ನಾಟಕವನ್ನು ಸಿಲಿಕಾನ್ ಹಬ್ ಆಗಿಸುವ ಕನಸು : ರೋಹಿತ್ ಭಟ್

ಬಂಟ್ವಾಳ: ಕರಾವಳಿ ಕರ್ನಾಟಕದ ಈ ಭಾಗದಲ್ಲಿ 25ಕ್ಕೂ ಅಧಿಕ ತಾಂತ್ರಿಕ ಕಾಲೇಜುಗಳಿಂದ ವಾರ್ಷಿಕ 15 ಸಾವಿರಕ್ಕೂ ಹೆಚ್ಚು ಇಂಜಿನಿಯರ್ ಗಳು, 150 ಕ್ಕೂ ಅಧಿಕ ಪದವಿ ಕಾಲೇಜುಗಳ 40 ಸಾವಿರಕ್ಕೂ ಅಧಿಕ ಪದವೀಧರರು ಲಭಿಸುತ್ತಿದ್ದಾರೆ. ಆದರೆ ಶೇ 95 ಕ್ಕೂ ಅಧಿಕ ಪ್ರತಿಭೆಗಳು ವಿದೇಶದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈ ಪ್ರತಿಭಾ ರಫ್ತಿಗೆ ಬದಲಾಗಿ ಕರಾವಳಿಯನ್ನು ಸಿಲಿಕಾನ್ ಹಬ್ ಆಗಿಸುವ ಕನಸು ಟೈ ಮಂಗಳೂರಿಗಿದೆ. ಈ ಭಾಗದಲ್ಲಿ ಸ್ಟಾರ್ಟಪ್ ಸಂಸ್ಕೃತಿ, ಉದ್ಯಮ ಶೀಲರನ್ನು , ಉದ್ಯಮವನ್ನು ಬೆಳೆಸುವ ಗುರಿ ನಮ್ಮದಾಗಬೇಕು. ಎಐ ಉದ್ಯೋಗಾವಕಾಶ ಕಸಿಯಲಿದೆ ಎನ್ನುವ ಆತಂಕದ ನಡುವೆಯೂ ಅವಕಾಶಗಳನ್ನು ತೆರೆಯುತ್ತಿದ್ದು ಅವುಗಳನ್ನು ಬಳಸಿಕೊಳ್ಳಬೇಕಾಗಿದೆ ಎಂದು ಉಡುಪಿಯ 99 ಗೇಮ್ಸ್ ಮತ್ತು ರೋಬೋ ಸಾಫ್ಟ್ ಸ್ಥಾಪಕ, ಟೈ ಮಂಗಳೂರು ಇದರ ಅಧ್ಯಕ್ಷ ರೋಹಿತ್ ಭಟ್ ಹೇಳಿದರು.

ಅವರು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಕಾಲೇಜಿನ ಡಾ. ಪಿ.ದಯಾನಂದ ಪೈ -ಪಿ.ಸತೀಶ್ ಪೈ ಆಡಿಟೋರಿಯಂನಲ್ಲಿ ಗುರುವಾರ ಆರಂಭಗೊಂಡ ಮೂರು ದಿನಗಳ ರಾಜ್ಯ ಮಟ್ಟದ 'ಆಕೃತಿ' ತಾಂತ್ರಿಕ, ಸಾಂಸ್ಕೃತಿಕ ಉತ್ಸವವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಹೊಸ ವೆಬ್ ಸೈಟ್ ಲೋಕಾರ್ಪಣೆಗೊಳಿಸಲಾಯಿತು.ಇಂದಿನ ದಿನಗಳು ಅವಕಾಶದ ಸಾಗರವಾಗಿದ್ದು ಅಧ್ಭುತ ಸಾಧನೆಗಳಿಗೆ ಅವಕಾಶ ವಿಪುಲವಾಗಿದೆ ಎಂದವರು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಡಿ. ವಾಸುದೇವ ಕಾಮತ್ ಮಾತನಾಡಿ ಕೆನರಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಕೌಶಲ, ಮೌಲ್ಯ, ನಾಯಕತ್ವಗುಣಗಳನ್ನು ಬೆಳೆಸುವುದರ ಜತೆಗೆ ಬದುಕಿನ ಸವಾಲುಗಳನ್ನು ಎದುರಿಸಲು ಅವರಿಗೆ ಶಿಕ್ಷಣ ನೀಡುತ್ತಿವೆ ಎಂದರು.

ಕಾಲೇಜು ಸಂಚಾಲಕ, ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ ದೂರದರ್ಶಿತ್ವ ಇದ್ದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಪದವೀಧರರು ಬರೇ ಉದ್ಯೋಗ ಪಡೆಯುವ ಕನಸು ಹೊಂದಿದ್ದರೆ ಸಾಲದು. ಉದ್ಯೋಗ ನೀಡುವ ಉದ್ಯಮಿಗಳಾಗಬೇಕು ಎಂದು ಹಾರೈಸಿದರು.

ಪ್ರಾಂಶುಪಾಲ ಡಾ. ನಾಗೇಶ್ ಹೆಚ್.ಆರ್. ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕ್ಯಾರೊಲ್ ಡಿ ಮೆಲ್ಲೋ ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರತಿಭಾನ್ವಿತರು, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು,  ಗೌರವಿಸಲಾಯಿತು. ವಿದ್ಯಾರ್ಥಿನಿ ನಿಸರ್ಗ ಸಾಧಕರ ವಿವರ

ನೀಡಿದರು.

ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಮೊದಲ ಬ್ಯಾಚಿನ ಹಳೆ ವಿದ್ಯಾರ್ಥಿ, ಕಸ್ಟಮರ್ ಸಕ್ಸಸ್ @ ಕ್ಯಾಪಿಲ್ಲರಿ ಹಿರಿಯ ನಿರ್ದೇಶಕ ಬಸ್ತಿ ಸುಹಾಸ್ ಶೆಣೈ ಅವರನ್ನು 'ಕೆನರಾ ಕೀರ್ತಿ ' ಗೌರವದೊಂದಿಗೆ ಸಮ್ಮಾನಿಸಲಾಯಿತು. ಅಗತ್ಯವಿಲ್ಲದನ್ನು ಮರೆಯಬೇಕು. ಬದುಕಿನ ಅಡೆ ತಡೆಗಳಿಗೆ ಸಿಲುಕದೇ ಬೆಳೆದು ಬದುಕಿನಲ್ಲಿ ತಮ್ಮದೇ ಛಾಪು ಮೂಡಿಸುವುದು ಎಲ್ಲರ ಗುರಿಯಾಗಬೇಕು ಎಂದವರು ಹೇಳಿದರು. ನೇಮಕಾತಿ, ತರಬೇತಿ ವಿಭಾಗ, ಹಳೆ ವಿದ್ಯಾರ್ಥಿ ಸಂಪರ್ಕ ವಿಭಾಗ ಮುಖ್ಯಸ್ಥೆ ದೀಪ್ತಿ ದಿನೇಶ್ ಪ್ರಭು ಸಮ್ಮಾನಿತರನ್ನು ಪರಿಚಯಿಸಿದರು.

ವಿದ್ಯಾರ್ಥಿ ಕೌನ್ಸಿಲ್ ಉಪಾಧ್ಯಕ್ಷೆ ಕೆ.ತೇಜಸ್ವಿ ನಾಯಕ್  ವಂದಿಸಿ .ವಿದ್ಯಾರ್ಥಿಗಳಾದ ಮಣೇಲ್ ಓಂ ನಾಯಕ್ ಮತ್ತು ಆನೋರಾ ಆಂಡ್ರಿಯಾ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು.

ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ. ಸುರೇಶ್ ಕಾಮತ್, ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಆಡಳಿತ ಮಂಡಳಿ ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಅಶ್ವಿನಿ ಕಾಮತ್, ಯೋಗೇಶ್ ಕಾಮತ್ , ಡಿ. ವಿಕ್ರಮ್ ಪೈ, ವಿನಾಯಕ್ ಕಾಮತ್, ಆಕೃತಿ ಉತ್ಸವದ ಪ್ರಧಾನ ಸಮನ್ವಯಕಾರ ನವೀನ್ ಎ.ಕಲಾಲ್ , ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಕೆ.ಆದಿತ್ಯ ಭಕ್ತ ಸಹಿತ ಆಕೃತಿಯ ವಿದ್ಯಾರ್ಥಿ ಸಮನ್ವಯಕಾರರಾದ ಸಂಜಯ್ ಕಾಮತ್, ಕೌಶಿಕ್ ಎಸ್.ಬಾಳಿಗಾ, ಪ್ರಣವ್ ಭಟ್, ಪ್ರಥಮೇಶ್ ನಾಯಕ್, ವರ್ಷಾ ನಾಯಕ್, ಪ್ರಜ್ಞಾ ನಾಯಕ್ ಉಪಸ್ಥಿತರಿದ್ದರು.

Leave a Comment